ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾ ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಗುರುವಾರ ಮಡಿಕೇರಿಯ ವಿವಿಧ ದೇವಾಲಯಗಳಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕೋಟೆ ಮಹಾಗಣಪತಿ ದೇವಾಲಯ, ಓಂಕಾರೇಶ್ವರ ದೇವಾಲಯ, ನಾಲ್ಕು ಕರಗ ದೇವಾಲಯಗಳು, ದಶಮಂಟಪಗಳ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಂಸದರು, ಹಿಂದೆ ನಡೆಸಿಕೊಂಡು ಬಂದ ರೀತಿಯಲ್ಲೇ ದಸರಾವನ್ನು ನಡೆಸಿಕೊಂಡು ಹೋಗಬೇಕಾಗಿದೆ. ಈಗಾಗಲೇ ಮೈಸೂರಿನಲ್ಲೂ ದಸರಾ ಸಿದ್ಧತೆಗಳು ಆರಂಭವಾಗಿವೆ. ಮೈಸೂರಿನಲ್ಲಿ ಸಾಂಪ್ರದಾಯಿಕ ಪೂಜೆಗಳು ಆರಂಭವಾದ ಬಳಿಕ ಮಡಿಕೇರಿ ದಸರಾದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಡಿಕೇರಿ ದಸರಾ ಸಂಬಂಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು.
ಬಾನು ಮುಷ್ತಾಕ್ ಸ್ಪಷ್ಟೀಕರಣ ನೀಡಲಿ
ಕನ್ನಡಿಗರು ಆರಾಧ್ಯ ದೈವ ಎಂದು ಭಾವಿಸಿರುವ ಭುವನೇಶ್ವರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನಮ್ಮ ವಿರೋಧವಿದ್ದು, ದಸರಾ ಉದ್ಘಾಟಿಸಲಿರುವ ಬಾನು ಮುಷ್ತಾಕ್ ಮೊದಲು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಸಂಸದ ಯದುವೀರ್ ಹೇಳಿದರು.
ಮೈಸೂರು ದಸರಾ ಉದ್ಘಾಟನೆ ವಿಚಾರವಾಗಿ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯಕ್ಕೆ ವೈಯಕ್ತಿಕ ಅರ್ಜಿ ಸಲ್ಲಿಕೆಯಾಗಿತ್ತು. ನಾವು ನ್ಯಾಯಾಲಯಕ್ಕೆ ಹೋಗಿಲ್ಲ. ಆದರೆ ಈ ಬಗ್ಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ಭುವನೇಶ್ವರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನಮ್ಮ ವಿರೋಧವಿದೆ. ಇದಕ್ಕೆ ಅವರು ಮೊದಲು ಸ್ಪಷ್ಟೀಕರಣ ನೀಡಬೇಕು. ಹಿಂದೂ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಅವರು ಬರಲಿ ಎಂಬುದು ನಮ್ಮ ಉದ್ದೇಶ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮದ್ದೂರು, ಚಾಮುಂಡಿ ಬೆಟ್ಟ, ನಾಗಮಂಗಲ ಮೊದಲಾದೆಡೆ ನಡೆದ ಕೃತ್ಯಗಳ ಬಗ್ಗೆ ಜನರೇ ಉತ್ತರ ಕೊಡುತ್ತಾರೆ ಎಂದರು.





