ಕುಶಾಲನಗರ : ಸಾಲ ಮಾಡಿಕೊಂಡು ಖಿನ್ನತೆಗೊಳಗಾಗಿದ್ದ ಸೈನಿಕರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಶಾಲನಗರದ ಕೆ.ಎಸ್.ಆರ್.ಟಿ.ಸಿ. ಡಿಪೋ ಹಿಂಭಾಗದ ಹೊಸ ಬಡಾವಣೆಯಲ್ಲಿ ನಡೆದಿದೆ.
ಹುಣಸೂರು ತಾಲ್ಲೂಕಿನ ನಂಜಾಪುರದ ಮಂಜುನಾಥ ಶೆಟ್ಟಿ ಎಂಬವರ ಪುತ್ರ ಭೂ ಸೇನೆಯ ಬೆಂಗಳೂರಿನ ಆರ್.ಟಿ.ನಗರದ ಪ್ಯಾರಾಚೂಟ್ ರೆಜಮೆಂಟ್‌ನ ಸೈನಿಕ ಎಂ.ಚಂದ್ರಶೇಖರ್(೩೫) ಮೃತಪಟ್ಟವರು. ಇವರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಇದನ್ನು ಓದಿ; ಬಾಲ ಸೈನಿಕನಾಗಬೇಕಿದ್ದವನು ಬರಹಗಾರನಾದ!
ಸೈನಿಕ ಎಂ.ಚಂದ್ರಶೇಖರ್ ಕೆ.ಎಸ್.ಆರ್.ಟಿ.ಸಿ. ಡಿಪೋ ಹಿಂಭಾಗದ ಹೊಸ ಬಡಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಹೊಸದಾಗಿ ಮನೆ ನಿರ್ಮಿಸಿದ್ದರು. ಆ ವೇಳೆ ಬ್ಯಾಂಕ್ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಭಾನುವಾರ ರಾತ್ರಿ ಪತ್ನಿ, ಮಕ್ಕಳು ಮನೆಯ ಹೊರಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತಂದೆ ಮಂಜುನಾಥಶೆಟ್ಟಿ ದೂರು ನೀಡಿದ್ದಾರೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್.ಐ. ಜಮೀರ್ ಅಹಮದ್ ತಿಳಿಸಿದ್ದಾರೆ. ತಿಂಗಳ ಹಿಂದೆ ರಜೆ ಮೇಲೆ ಮನೆಗೆ ಬಂದಿದ್ದರು. ದೀಪಾವಳಿ ಹಬ್ಬದ ನಂತರ ಕರ್ತವ್ಯಕ್ಕೆ ವಾಪಸ್ ತೆರಳಬೇಕಿತ್ತು. ಭಾನುವಾರ ಶವ ಪರೀಕ್ಷೆ ನಂತರ ಸ್ವಗ್ರಾಮ ನಂಜಾಪುರದಲ್ಲಿ ಅಂತ್ಯಕ್ರಿಯೆ ನಡೆಯಿತು.





