ಸೋಮವಾರಪೇಟೆ : ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಸಂವಿಧಾನ ವಿರೋಧವಾಗಿದ್ದು, ಆರೋಪಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟ ಆಗ್ರಹಿಸಿದೆ.
ಅರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅ.೧೦ರಂದು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಗುವುದು. ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರು, ದಲಿತಪರ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಜಯಪ್ಪ ಹಾನಗಲ್ ಹೇಳಿದರು.
ಇದನ್ನೂ ಓದಿ: ಬಿಗ್‌ಬಾಸ್ ಬಂದ್ ಹಿಂದೆ ಡಿಕೆಶಿ ಕೈವಾಡವಿಲ್ಲ: ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ
ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ನ್ಯಾಯಧೀಶ ರಾಕೇಶ್ ಕಿಶೋರ್ ಎಂಬ ವ್ಯಕ್ತಿ ಸನಾತನ ಧರ್ಮಕ್ಕೆ ಅವಹೇಳನವಾಗುವುದನ್ನು ಸಹಿಸುವುದಿಲ್ಲ ಎಂಬುದಾಗಿ ಹೇಳಿ ಶೂ ಎಸೆದಿರುವುದು ಸಂವಿಧಾನ ವಿರೋಧ ಕ್ರಮವಾಗಿದೆ. ಕಾನೂನು ತಿಳಿದಿರುವ ವ್ಯಕ್ತಿ ಸಂವಿಧಾನವನ್ನು ಗೌರವಿಸಬೇಕೆಂಬ ಪರಿಜ್ಞಾನವಿಲ್ಲರುವುದು ಖಂಡನೀಯ. ಇವರ ಹಿಂದಿನ ಸನಾತನ ಸಿದ್ಧಾಂತವೇ ಈ ರೀತಿ ವರ್ತಿಸುವಂತೆ ಮಾಡಿದೆ ಎಂದು ಹೇಳಿದರು.
ಒಕ್ಕೂಟದ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಶೂ ಎಸೆತ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಖಂಡಿಸಿದ್ದಾರೆ. ಅರೋಪಿ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮವಾಗಬೇಕು. ಸಂವಿಧಾನ ವಿರೋಧಿಗಳಿಗೆ ಕಾನೂನಿನ ಮೂಲಕವೇ ತಕ್ಕಪಾಠ ಕಲಿಸಬೇಕು. ಅರೋಪಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವ ತನಕ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟವನ್ನು ರೂಪಿಸಲಾಗುವುದು. ಮೊದಲು ಅ.೧೦ರಂದು ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ಮಾಡಿದ ನಂತರ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಒಕ್ಕೂಟದ ಕಾರ್ಯದರ್ಶಿ ಬಿ.ಇ.ಜಯೇಂದ್ರ, ಸಹಕಾರ್ಯದರ್ಶಿ ಮಹೇಶ್, ಪದಾಽಕಾರಿ ಈರಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.





