ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಗಾಳಿ ಸಹಿತ ಉತ್ತಮ ಮಳೆಯಾಗುತ್ತಿದೆ. ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಳೆದ ೨ ದಿನಗಳಿಂದ ಜಿಲ್ಲೆಯಾದ್ಯಂತ ಗಾಳಿ ಸಹಿತ ಉತ್ತಮ ಮಳೆಯಾಗುತ್ತಿದೆ. ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ನದಿ- ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಭಾರೀ ಮಳೆಯಾಗುವುದಾಗಿ ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಎಚ್ಚರದಿಂದ ಇರಲು ಮನವಿ ಮಾಡಲಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೪೯.೪೪ ಮಿ.ಮೀ. ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧೭.೫೫ ಮಿ.ಮೀ. ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ೬೦.೩೦ ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ ೫೨.೨೫ ಮಿ.ಮೀ., ಪೊನ್ನಂಪೇಟೆ ತಾಲ್ಲೂಕಿನಲ್ಲಿ ೩೫.೦೭ ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ ೭೯.೬೦ ಮಿ.ಮೀ., ಕುಶಾಲನಗರ ತಾಲ್ಲೂಕಿನಲ್ಲಿ ೨೦ ಮಿ.ಮೀ. ಮಳೆಯಾಗಿದೆ.
ಮಡಿಕೇರಿ ಕಸಬಾ ೫೩.೫೦, ನಾಪೋಕ್ಲು ೫೨.೨೦, ಸಂಪಾಜೆ ೫೭.೫೦, ಭಾಗಮಂಡಲ ೭೮, ವಿರಾಜಪೇಟೆ ೫೯, ಅಮ್ಮತ್ತಿ ೪೬.೫೦, ಹುದಿಕೇರಿ ೫೦.೮೦, ಶ್ರೀಮಂಗಲ ೪೩.೬೦, ಪೊನ್ನಂಪೇಟೆ ೨೭, ಬಾಳೆಲೆ ೧೮.೯೦, ಸೋಮವಾರಪೇಟೆ ೮೨.೬೦, ಶನಿವಾರಸಂತೆ ೬೧, ಶಾಂತಳ್ಳಿ ೧೪೦, ಕೊಡ್ಲಿಪೇಟೆ ೩೪.೮೦, ಕುಶಾಲನಗರ ೧೦, ಸುಂಟಿಕೊಪ್ಪ ೩೦ ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಜಲಾಶಯಕ್ಕೆ ೭,೫೮೨ ಕ್ಯೂಸೆಕ್ಸ್‌ನಷ್ಟು ನೀರು ಹರಿದು ಬರುತ್ತಿದ್ದು, ೧೦,೦೦೦ ಕ್ಯೂಸೆಕ್ಸ್‌ನಷ್ಟು ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಮಳೆ ಹೆಚ್ಚಾದಲ್ಲಿ ಹೊರಹರಿವು ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ.





