ಮಡಿಕೇರಿ: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಂಡಿರುವುದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಎರಡು ವರ್ಷದ ಸಾಧನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ದೂರಿದ್ದಾರೆ.
ಈ ಕುರಿತು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.20ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣಗೊಳ್ಳುತ್ತದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ ಮಾಡಲು ಮುಂದಾಗಿದೆ. ಆದರೆ, ಯಾವ ಸಾಧನೆಯನ್ನು ಜನರ ಮುಂದಿಡಲು ಸಾಧನಾ ಸಮಾವೇಶ ನಡೆಸುತ್ತೀರಿ ಎಂದು ಪ್ರಶ್ನಿಸಿದರು.
ಬೆಲೆ ಏರಿಕೆ ನಿಯಂತ್ರಣ ಮಾಡದೇ ಇರುವುದು, ಮೂಡಾ ಸೈಟ್ ಹಗರಣ, ವಾಲ್ಮೀಕಿ ನಿಗಮದ ಅನುದಾನ ದುರುಪಯೋಗ, ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರನ್ನು ಬೀಚ್ ಬೆಂಗಳೂರು ಮಾಡಿರುವುದು, ಹೆಲ್ತ್ ಕಿಟ್ ಹಗರಣ ಇವೆಲ್ಲವೂ ರಾಜ್ಯ ಸರ್ಕಾರದ ಸಾಧನೆ ಎಂದು ಜನತೆಗೆ ಹೇಳುತ್ತಿರಾ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿ ವ್ಯಂಗ್ಯವಾಡಿದರು.