Mysore
24
overcast clouds

Social Media

ಶನಿವಾರ, 04 ಏಪ್ರಿಲ 2026
Light
Dark

ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸಿ : ಸಚಿವ ಸಂತೋಷ್ ಲಾಡ್

ಮಡಿಕೇರಿ : ಕಾರ್ಮಿಕರಿಗೆ ಕನಿಷ್ಠ ವೇತನ ಕಲ್ಪಿಸಬೇಕು. ಆರೋಗ್ಯ ವಿಮೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲಳ್ಳುವಂತಾಗಲು ಕಾರ್ಮಿಕರಿಗೆ ಮಾಹಿತಿ ನೀಡುವಂತಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಸಂಘಟನೆಗಳು, ಹೋಂಸ್ಟೇ ಹಾಗೂ ಹೋಟೆಲ್ ಅಸೋಷಿಯೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಹೋಂಸ್ಟೇ, ಹೋಟೆಲ್ ಸೇರಿದಂತೆ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಸುರಕ್ಷತೆಗೆ ಒತ್ತು ನೀಡಬೇಕು. ಸಿಸಿಟಿವಿ ಅಳವಡಿಸುವುದು, ಸಂಚಾರಿ ದೂರವಾಣಿ ಸಂಖ್ಯೆ ಸೇರಿದಂತೆ ವಾಸ್ತವ್ಯ ಹೂಡುವವರ ಮಾಹಿತಿ ಇರಬೇಕು ಎಂದು ಹೇಳಿದರು.

ಹೋಂ ಸ್ಟೇ ನೋಂದಣಿ, ಪರವಾನಗಿ, ನವೀಕರಣ ಸಂಬಂಧ ಪ್ರವಾಸೋದ್ಯಮ, ಪೌರಾಡಳಿತ ಹಾಗೂ ಪಂಚಾಯತ್ ರಾಜ್ ಸಚಿವರ ಜೊತೆ ಚರ್ಚಿಸಲಾಗುವುದು. ಜೊತೆಗೆ ಶಾಸಕರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಲು ನಿಯೋಗ ತೆರಳುವಂತೆ ಸಲಹೆ ಮಾಡಿದರು. ಹೋಂ ಸ್ಟೇ ನೋಂದಣಿ, ಪರವಾನಗಿ ನೋಂದಣಿ ಮತ್ತಿತರ ಸಂಬಂಧ ಸಕಾಲದಲ್ಲಿ ಅರ್ಜಿ ಸಲ್ಲಿಸುವಂತೆ ಸಲಹೆ ಮಾಡಿದರು.

ಕಾರ್ಮಿಕರ ವೇತನ ಮತ್ತಿತ್ತರ ಬಗ್ಗೆ ದೂರುಗಳು ಬಂದರೆ ಕಂದಾಯ, ಕಾರ್ಮಿಕ, ಪ್ರವಾಸೋದ್ಯಮ ಪೊಲೀಸ್, ಸೆಸ್ಕ್, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸ್ಥಳೀಯ ಸಂಸ್ಥೆಗಳು, ಹೀಗೆ ಜಂಟಿ ತಪಾಸಣೆ ಕೈಗೊಳ್ಳಬೇಕು ಎಂದು ಸಚಿವರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಮಂಥರ್ ಗೌಡ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಪೌರಾಡಳಿತ ಸಚಿವ ರಹೀಮ್ ಖಾನ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ದಸರಾ ನಂತರ ನಿಯೋಗ ತೆರಳಿ ಭೇಟಿ ಮಾಡಲಾಗುವುದು. ಹೋಂಸ್ಟೇ ಅಸೋಷಿಯೇಷನ್‌ಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಬೇಕಿದ್ದು, ಕೆಲವು ತಾಂತ್ರಿಕ ತೊಂದರೆಯಿಂದ ವಿಳಂಬವಾಗುತ್ತಿದೆ. ಆದ್ದರಿಂದ ಮ್ಯಾನ್ಯುವೆಲ್ ಮೂಲಕ ನೋಂದಣಿ ಮಾಡಿಕೊಳ್ಳುವಂತಾಗಬೇಕು. ಪರವಾನಗಿ ನವೀಕರಣ ಮಾಡಬೇಕು ಎಂದು ಸಲಹೆ ಮಾಡಿದರು.

ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮದಿಂದ ಹಲವರಿಗೆ ಉದ್ಯೋಗ ದೊರೆತಿದೆ ಎಂದರು.

ಹೋಂಸ್ಟೇ ಅಸೋಷಿಯೇಷನ್‌ನ ಮಾಜಿ ಅಧ್ಯಕ್ಷ ದಿಲೀಪ್ ಚಂಗಪ್ಪ ಮಾತನಾಡಿ, ಹೋಂ ಸ್ಟೇಗಳ ನೋಂದಣಿ, ಪರವಾನಗಿ ನವೀಕರಣ ಮತ್ತಿತರ ಸಂಬಂಧ ಕಾಲ ಮಿತಿಯಲ್ಲಿ ಆಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪೊಲೀಸ್ ಇಲಾಖೆಯಿಂದ ಕಾಲ ಮಿತಿಯಲ್ಲಿ ಎನ್‌ಒಸಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಮಿಕ ಸಂಘಟನೆಯ ಮುಖಂಡ ಭರತ್ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕ ನಿರೀಕ್ಷಕ ಅಽಕಾರಿಯವರ ಕೊರತೆ ಇದ್ದು, ವಿರಾಜಪೇಟೆ ಮತ್ತು ಸೋಮವಾರಪೇಟೆಗೆ ಒಬ್ಬರೇ ಅಧಿಕಾರಿ ಇದ್ದಾರೆ. ವಿರಾಜಪೇಟೆ ಮತ್ತು ಪೊನ್ನಂಪೇಟೆಗೆ ಕಾರ್ಮಿಕ ನಿರೀಕ್ಷಕ ಅಧಿಕಾರಿಯವರನ್ನು ನಿಯೋಜಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಕೊಡಗು ಜಿಲ್ಲೆಯಲ್ಲಿ ಜೀತಪದ್ಧತಿ ಇನ್ನೂ ಸಹ ಜೀವಂತವಾಗಿದೆ. ಇದನ್ನು ಹೋಗಲಾಡಿಸಬೇಕು. ಯರವ, ಪಣಿಯ ಎರವ, ಕಾಡುಕುರುಬ, ಜೇನುಕುರುಬ, ಬೆಟ್ಟಕುರುಬ ಆದಿವಾಸಿ ಕುಟುಂಬಗಳು ಇಂದಿಗೂ ಸಹ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಇಂತಹ ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ತಲುಪುವಂತಾಗಬೇಕು ಎಂದು ಕೋರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಿರ್ದಿಷ್ಟ ಪ್ರಕರಣ ಹೇಳಿದ್ದಲ್ಲಿ ಕಂದಾಯ, ಪೊಲೀಸ್, ಪಂಚಾಯತ್ ರಾಜ್, ಕಾರ್ಮಿಕ, ಸೆಸ್ಕ್ ಸೇರಿದಂತೆ ಜಂಟಿ ತಂಡ ತೆರಳಿ ಪರಿಶೀಲನೆ ಮಾಡಲಿದ್ದಾರೆ ಎಂದು ಸಚಿವರು ಹೇಳಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಟಿ.ಕಾವೇರಿ, ತೋಟ ಕಾರ್ಮಿಕ ಸಂಘಟನೆಯ ಮಹಾದೇವು, ಕಾಫಿ ಬೆಳೆಗಾರರಾದ ಬೋಸ್ ಮಂದಣ್ಣ, ಕುಶಾಲನಗರ ಚೇಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಕೆ.ಎಸ್.ನಾಗೇಶ್ ಇತರರು ಮಾತನಾಡಿದರು.

ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಮಹರೂಸ್ ಖಾನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾರ್ಮಿಕ ಇಲಾಖೆ ಆಯುಕ್ತ ಎಚ್.ಎನ್.ಗೋಪಾಲಕೃಷ್ಣ, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಇತರರು ಇದ್ದರು.

Tags:
error: Content is protected !!