Mysore
18
scattered clouds

Social Media

ಗುರುವಾರ, 22 ಜನವರಿ 2026
Light
Dark

ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

Opposition Has No Other Work Than Alleging Against the Government: Minister N.S. Boseraju

ಕೊಡಗು : ಅನುದಾನ ಹಂಚಿಕೆ ಸೇರಿದಂತೆ ಸರ್ಕಾರದಲ್ಲಿ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುತ್ತಿದ್ದು, ಯಾರೋ ಒಂದಿಬ್ಬರು ಶಾಸಕರು ಹೇಳಿದ್ದನ್ನೇ ಸತ್ಯ ಎಂದು ಆರೋಪ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಮಾಡಲು ಬೇರೆ ಕೆಲಸ ಇಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿಯೂ ಆಗಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಹಾರಂಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನ ಹಂಚಿಕೆ, ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಯಾರೋ ಒಂದಿಬ್ಬರು ಶಾಸಕರು ಮಾತನಾಡಿದ್ದಾರೆ. ಉಳಿದೆಲ್ಲಾ ಶಾಸಕರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ಹೀಗಿರುವಾಗ ಸರ್ಕಾರದ ಮೇಲೆ ವಿನಾ ಕಾರಣ ಆರೋಪ ಮಾಡಲಾಗುತ್ತಿದೆ. ಸರ್ಕಾರದಲ್ಲಿ ಸಾಕಷ್ಟು ಹಣ ಇದ್ದು, ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದರು.

ವಸತಿ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಚಿವರಿಂದ ಸಮಸ್ಯೆಯಾಗಿದೆ ಎಂದು ಅವರು ಹೇಳಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗುತ್ತಿರುವುದನ್ನು ಹೇಳಿದ್ದಾರೆ. ಮುಖ್ಯಮಂತ್ರಿಯವರು ಬಿ.ಆರ್.ಪಾಟೀಲ್ ಅವರನ್ನು ಕರೆಸಿ ಮಾತನಾಡಿದ್ದಾರೆ. ಸಮಸ್ಯೆ ಇತ್ಯರ್ಥವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ನ ರಾಜು ಕಾಗೆ ಅವರ ಆರೋಪದ ಬಗ್ಗೆ ಮಾತನಾಡಿ, ರಾಜು ಕಾಗೆ ಅವರು ಭಾವನಾತ್ಮಕ ವ್ಯಕ್ತಿ. ಸ್ಥಳೀಯವಾಗಿ ಆಗಿರುವ ಸಮಸ್ಯೆಯನ್ನು ಅವರು ಹೇಳಿಕೊಂಡಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಕಡೆ ಕೆಲಸ ಆಗುತ್ತಿದ್ದರೂ ಅವರ ಕ್ಷೇತ್ರದಲ್ಲಿ ಆಗುತ್ತಿಲ್ಲ ಎಂದಾದರೆ ಅದು ಅಧಿಕಾರಿಗಳ ಅಲಕ್ಷ್ಯದಿಂದ. ಈ ಬಗ್ಗೆಯೂ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಳನ್ನು ನೀಡಿದ್ದಾರೆ ಎಂದರು.

ಹಣದ ಕೊರತೆ ಇಲ್ಲ
ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ.ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ವಾರ್ಷಿಕ 90 ಸಾವಿರ ಕೋಟಿ ರೂ. ಸಬ್ಸಿಡಿ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಹಾಕಲಾಗುತ್ತಿದೆ. ಕ್ಷೇತ್ರಗಳ ಅಭಿವೃದ್ಧಿಗೆ ಎಂದು 8,000 ಕೋಟಿ ರೂ. ತೆಗೆದಿರಿಸಲಾಗಿದ್ದು, ಈಗಾಗಲೇ ಮಾರ್ಗಸೂಚಿಗಳನ್ನು ರಚಿಸಿ ಆ ಅನುದಾನವನ್ನು ಶಾಸಕರಿಗೆ ಹಂಚಿಕೆ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದರು.

ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಈ ಭಾಗಕ್ಕೆ 483 ಕೋಟಿ ರೂಪಾಯಿಗಳ ಕಾಮಗಾರಿಗೆ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಇದರಲ್ಲಿ 50 ಕೋಟಿ ರೂ. ಅನ್ನು ಕೊಡಗು ಜಿಲ್ಲೆಯ 2 ತಾಲೂಕುಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಕಾವೇರಿ ನೀರಾವರಿ ನಿಗಮದಿಂದ 150 ಕೋಟಿ ರೂ. ಅನುದಾನ ಬಂದಿದೆ. ಸರ್ಕಾರಿ ನೌಕರರಿಗೆ ಸಮರ್ಪಕವಾಗಿ ವೇತನ ನೀಡಲಾಗುತ್ತಿದೆ. ಬೊಕ್ಕಸದಲ್ಲಿ ಹಣ ಇಲ್ಲದಿದ್ದರೆ ಇವೆಲ್ಲವೂ ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.

ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ ಸಚಿವರು, ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಚರ್ಚೆ ಮಡಲು ಬೇರೆ ವಿಷಯ ಲಭ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರದ ಬಗ್ಗೆ ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳಿಗೆ ಕೆಲಸದ ಮೂಲಕ ನಾವು ಉತ್ತರ ನೀಡುತ್ತಿದ್ದೇವೆ ಎಂದರು.

Tags:
error: Content is protected !!