ಮೈಸೂರು: ವಿರಾಜಪೇಟೆ ವಿಭಾಗ, ತಿತಿಮತಿ ಉಪ ವಿಭಾಗ, ತಿತಿಮತಿ ವಲಯದ ಮಾಯಮುಡಿ, ದೇವರಪುರ ಮತ್ತು ತಿತಿಮತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಖಾಸಗಿ ಜಮೀನುಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಯಶಸ್ವಿಯಾಯಿತು.
ಈ ಕಾರ್ಯಾಚರಣೆಯಲ್ಲಿ ಅನನ್ಯ ಮತ್ತು NE-4 ಕಾಡಾನೆಗಳ ಗುಂಪು ಸೇರಿ ಒಟ್ಟು 18 ಕಾಡಾನೆಗಳನ್ನು ಯಶಸ್ವಿಯಾಗಿ ಕಾಡಿಗೆ ಅಟ್ಟಲಾಗಿದೆ.
ಮಾಯಮುಡಿ ಗ್ರಾಮದ ಅಂಬುಕೋಟೆಯಿಂದ ಅನನ್ಯ ಗುಂಪಿಗೆ ಸೇರಿದ 07 ಕಾಡಾನೆಗಳು ಹಾಗೂ ಮಾಯಮುಡಿ ಗ್ರಾಮ ಪಂಚಾಯಿತಿ ಬಳಿಯಿಂದ 02 ಗಂಡಾನೆಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಾಡಾನೆಗಳನ್ನು ದೇವಮಚ್ಚಿಯ ಬಳಿ ಮಾವುಕಲ್ ಮೀಸಲು ಅರಣ್ಯಕ್ಕೆ ಯಶಸ್ವಿಯಾಗಿ ಅಟ್ಟಲಾಗಿದೆ.
ಅರವತೊಕ್ಲು ಗ್ರಾಮದಲ್ಲಿ ಬೀಡುಬಿಟ್ಟಿದ್ದ NE-4 ಗುಂಪಿನ 09 ಕಾಡಾನೆಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಕಾಡಾನೆಗಳನ್ನು ನೊಖ್ಯಸಿದ್ದಾಪುರ ಗ್ರಾಮದ ಕುಂಜುರಾಮನ ಕಟ್ಟೆ ಬಳಿ ಅರಿಕೇರಿ ಮೀಸಲು ಅರಣ್ಯಕ್ಕೆ ಯಶಸ್ವಿಯಾಗಿ ಅಟ್ಟಲಾಗಿದೆ.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸೂಚನೆ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.





