ಮಡಿಕೇರಿ : ಮುಂದಿನ 40 ದಿನಗಳು ಕೊಡಗಿನ ಎಲ್ಲಾ ಅಧಿಕಾರಿಗಳಿಗೆ ರಜೆ ಇಲ್ಲ ಎಂದು ಕೊಡಗು ಉಸ್ತುವಾರಿ ಸಚಿವ ಭೋಸರಾಜು ಖಡಕ್ ಸೂಚನೆ ನೀಡಿದ್ದಾರೆ.
ನಗರದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು ಅನಾಹುತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಟ್ಟು ಎಲ್ಲೂ ಹೋಗಬಾರದು. ಮಳೆಗಾಲ ಎದುರಿಸಲು ಅಧಿಕಾರಿಗಳು ಸರ್ವಸನ್ನದ್ಧರಾಗಿರಬೇಕು. ಜೊತೆಗೆ ಈ ನಿಯಮ ಚಾಚೂ ತಪ್ಪದೆ ಪಾಲಿಸಬೇಕು. 10 ದಿನಗಳ ಒಳಗೆ ಹಾಸ್ಟೆಲ್, ಶಾಲಾ ಕಟ್ಟಡದ ಪರಿಸ್ಥಿತಿ ಪರಿಶೀಲಿಸಿ ವರದಿ ನೀಡಬೇಕು ಎಂದು ಸೂಚಿಸಿದರು.
ನಾಡಗೀತೆಗೆ ಅವಮಾನ: ಭೋಜೇಗೌಡ ಅಸಮಾಧಾನ
ಕೆಡಿಪಿ ಸಭೆಯಲ್ಲಿ ನಾಡಗೀತೆಗೆ ಅವಮಾನ ಮಾಡಿದ ಘಟನೆ ಸಾಕಷ್ಟು ಮುಜುಗರಕ್ಕೆ ಕಾರಣವಾಯಿತು. ಸಭೆಯ ಆರಂಭದಲ್ಲಿ ಅಧಿಕಾರಿಗಳು ನಾಡಗೀತೆಯ ರೆಕಾರ್ಡ್ ಅನ್ನು ಪ್ಲೇ ಮಾಡಿದರು. ಆದರೆ ಗೀತೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಪ್ಯಾರದ ಭಾಗವನ್ನು ಕಟ್ ಮಾಡಲಾಗಿತ್ತು. ಇದರಿಂದ ಕೆಂಡಾಮಂಡಲರಾದ ಎಂಎಲ್‌ಸಿ ಭೋಜೇಗೌಡ, ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಡಗೀತೆ ಸರಿಯಾಗಿ ಹಾಕಿಲ್ಲ. ನಿಯಮದಂತೆ ಗೀತೆಯನ್ನು ಹಾಕಬೇಕಾಗಿತ್ತು. ಹೀಗೆ ಕಟ್ ಮಾಡಿ ಎಡಿಟ್ ಮಾಡಿ ಹಾಕುವ ಬದಲು ಮಕ್ಕಳಿಂದ ಹಾಡಿಸಬಹುದಿತ್ತಲ್ಲ ಅಂತ ಖಾರವಾಗಿ ಪ್ರಶ್ನಿಸಿದರು. ಅಲ್ಲದೆ ಅಧಿಕಾರಿ ಮತ್ತು ಸಿಬ್ಬಂದಿ ಅಮಾನತ್ತಿಗೆ ಒತ್ತಾಯಿಸಿದರು.





