ಸಿದ್ದಾಪುರ: ಗ್ರಾಮ ಪಂಚಾಯಿತಿಯ ಸಾರ್ವಜನಿಕ ನೀರು ಸರಬರಾಜು ಕೊಳವೆ ಬಾವಿ ಅನತಿ ದೂರದಲ್ಲಿ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಕೊಳವೆ ಬಾವಿ ಕೊರೆಯುವುದನ್ನು ತಡೆಯುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.
ನೆಲ್ಲಿ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1ನೇ ವಾರ್ಡ್‌ನ ಬೀರನ ಕೈಮಾಡದಲ್ಲಿ ಪಂಚಾಯಿತಿ ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆಯಲಾಗುತ್ತಿತ್ತು. ಸಾರ್ವಜನಿಕ ನೀರು ಸರಬರಾಜು ಕೊಳವೆ ಬಾವಿಯ ಅನತಿ ದೂರದಲ್ಲಿ ಇದನ್ನು ಕೊರೆಯಲಾಗುತ್ತಿತ್ತು. ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿಷಯ ತಿಳಿದ ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಸ್ಥಳಕ್ಕಾಗಮಿಸಿ ಕೊಳವೆಬಾವಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಕೊಳವೆ ಬಾವಿ ತೆರೆಯಲು ಯಾವುದೇ ಅನುಮತಿ ಪತ್ರ ಇಲ್ಲದೆ ಇರುವುದರಿಂದ ಅದನ್ನು ಮುಚ್ಚಿಸಿ ಗಾಡಿಯನ್ನು ಹಿಂದಿರುಗಿಸಿ ಕಳುಹಿಸಿದರು.
ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಮಣಿ ಎಂಬುವವರು, 150ಕ್ಕೂ ಹೆಚ್ಚು ಕುಟುಂಬಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಖಾಸಗಿ ಕೊಳವೆ ಬಾವಿಯನ್ನು ಕೊರೆಸುತ್ತಿದ್ದರು. ಇದರಿಂದ ಗ್ರಾಮ ಪಂಚಾಯಿತಿಯ ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆ ಆಗಲಿದೆ ಎಂಬ ಕಾರಣಕ್ಕಾಗಿ ಅದನ್ನು ತಡೆಯಲಾಗಿದೆ. ಈಗಾಗಲೆ ಬೇಸಿಗೆಯಲ್ಲಿ ಈ ಭಾಗದಲ್ಲಿ ನೀರಿನ ಅಭಾವ ಸೃಷ್ಟಿಯಾಗುತ್ತಿದ್ದು, ಈ ಕೊಳವೆ ಬಾವಿ ಬಂದರೆ ಮತ್ತಷ್ಟು ಸಮಸ್ಯೆಯಾಗುವ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿದೆ ಎಂದರು.





