ಮಡಿಕೇರಿ: ಆಕಸ್ಮಿಕವಾಗಿ ಒಂಟಿ ನಳಿಕೆಯ ಬಂದೂಕಿನಿಂದ ಗುಂಡು ಹಾರಿ ವ್ಯಕ್ತಿಯೊಬ್ಬರು ಅಸು ನೀಗಿರುವ ಘಟನೆ ನಿನ್ನೆ ರಾತ್ರಿ ಮಡಿಕೇರಿ ತಾಲ್ಲೂಕಿನ ಚೇರಂಬಾಣೆಯಲ್ಲಿ ನಡೆದಿದೆ.
ಚೇರಂಬಾಣೆಯ ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಎಂಬುವವರು ಆಕಸ್ಮಿಕವಾಗಿ ತಗುಲಿದ ಗುಂಡೇಟಿಗೆ ಬಲಿಯಾದವರಾಗಿದ್ದಾರೆ.
ಚೇರಂಬಾಣೆ ಪಟ್ಟಣದಲ್ಲಿ ವೈನ್ ಶಾಪ್ ಹೊಂದಿರುವ ಮಿತ್ರ ಅವರು ರಾತ್ರಿ 12 ಗಂಟೆ ಸಮಯದಲ್ಲಿ ವೈನ್ ಶಾಪ್ ಮುಚ್ಚಿ ಬಂದೂಕಿನೊಂದಿಗೆ ಹೊರಬಂದಿದ್ದಾರೆ. ಇದೇ ಸಂದರ್ಭ ಹಾಲು ಸರಬರಾಜಿನ ವಾಹನ ಬಂದಿದ್ದು, ಮಿತ್ರ ಚಂಗಪ್ಪ ಅವರು ಹಾಲು ಕೊಂಡುಕೊಳ್ಳಲೆಂದು ಕೈಯಲ್ಲಿದ್ದ ಬಂದೂಕು ಅನ್ನು ಸ್ಕೂಟರ್ ಮೇಲಿಟ್ಟಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಕೆಳಗೆ ಬಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಮಿತ್ರ ಅವರ ಸೊಂಟದ ಭಾಗಕ್ಕೆ ತಗುಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.





