ಮಡಿಕೇರಿ: ಪ್ರೀತಿಸಿದ ಹುಡುಗಿಯ ಮದುವೆ ಲಗ್ನಪತ್ರಿಕೆ ನೋಡಿ ಮನನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲದ ಪೆಗ್ಗರಿಕಾಡು ಗ್ರಾಮದಲ್ಲಿ ನಡೆದಿದೆ.
ಎಚ್.ಕೆ.ಸುಮಂತ್ ಎಂಬಾತನೇ ಆತ್ಮಹತ್ಯೆಗೆ ಶರಣಾಗಿರುವ ಯುವಕನಾಗಿದ್ದಾನೆ. ಸುಮಂತ್‌ಗೆ ಕೆಲವು ವರ್ಷಗಳ ಹಿಂದೆ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಯನ್ನು ಪ್ರೀತಿ ಮಾಡುತ್ತಿದ್ದ ಸುಮಂತ್, ಆಕೆಯನ್ನು ಮದುವೆ ಆಗುವಂತೆ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಆದರೆ ಆಕೆ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಮಂತ್ ಆರು ತಿಂಗಳ ಹಿಂದೆ ಕೆಲಸ ಬಿಟ್ಟು ಬಂದಿದ್ದ. ಪ್ರೀತಿಸಿದ ಹುಡುಗಿಯ ಲಗ್ನಪತ್ರಿಕೆ ನೀಡಿದ ಆತನಿಗೆ ಹುಡುಗಿ ಮದುವೆ ನಿಗದಿಯಾದ ದಿನಾಂಕ ಗೊತ್ತಾಗಿದೆ.
ಅಕ್ಟೋಬರ್.18ರಂದೇ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಸುಮಂತ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಮಂತ್ ಮೃತಪಟ್ಟಿದ್ದಾನೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





