ಮಡಿಕೇರಿ: ಕೊಡಗು ಜಿಲ್ಲೆಯ ಕೆಲವೆಡೆ ಬುಧವಾರ ಸಂಜೆ ವೇಳೆಗೆ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ತಂಪೆರೆದಿದೆ.
ನಾಪೋಕ್ಲು, ಶ್ರೀಮಂಗಲ, ಬಲ್ಯಮಂಡೂರು, ಕಾನೂರು, ಎಮ್ಮೆಮಾಡು, ಸೋಮವಾರಪೇಟೆ, ಟಿ.ಶೆಟ್ಟಿಗೇರಿ ಸೇರಿದಂತೆ ಕೆಲೆವೆಡೆ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಬಿಸಿಲಿನ ತಾಪ ಹೆಚ್ಚಿದ್ದರಿಂದ ಜನರು ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಮಳೆಯಾಗಿರುವುದರಿಂದ ಕಾದಿದ್ದ ಇಳೆ ತಂಪಾಗಿದ್ದು, ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಕಡೆ ಕಾಫಿ ಕೊಯ್ಲು ಪೂರ್ಣಗೊಂಡಿದ್ದು, ಕೃತಕವಾಗಿ ಕಾಫಿ ಗಿಡಗಳಿಗೆ ನೀರು ಹಾಯಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲೇ ಮಳೆಯಾಗಿರುವುದರಿಂದ ಕಾಫಿ ಬೆಳೆಗಾರರಿಗೂ ಅನುಕೂಲವಾಗಿದೆ.