ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿ ಇರುವ ಲೋಕೋಪಯೋಗಿ ಇಲಾಖೆಯ (PWD) ಕಚೇರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದ ದೂರಿನ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಲೋಕಾಯುಕ್ತ ತಂಡ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.
ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿರುವ ಗಿರೀಶ್ ಅವರ ನಿವಾಸ ಹಾಗೂ ಸಂಬಂಧಿತ ಆಸ್ತಿಗಳ ಮೇಲೆ ಶೋಧ ನಡೆದಿದೆ. ಇದೇ ವೇಳೆ ಮಡಿಕೇರಿಯಲ್ಲಿ ಲೋಕಾಯುಕ್ತ ಸಬ್‌ಇನ್ಸ್‌ಪೆಕ್ಟರ್ ವೀಣಾ ನಾಯ್ಕ್ ಅವರ ತಂಡ ಗಿರೀಶ್ ಅವರ ಕಚೇರಿ ಮತ್ತು ಇತರೆ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ.
ಅಕ್ರಮ ಆಸ್ತಿ ಸಂಗ್ರಹಿಸಿದರೆಂಬ ಆರೋಪದ ಹಿನ್ನೆಲೆಯಲ್ಲಿ ಗಿರೀಶ್ ಅವರ ಆದಾಯಕ್ಕೆ ಹೊಂದಿಕೆ ಆಗದ ಆಸ್ತಿಗಳ ವಿವರಗಳನ್ನು ಪರಿಶೀಲಿಸುವ ಕಾರ್ಯ ಸ್ಥಳೀಯ ಲೋಕಾಯುಕ್ತ ತಂಡಗಳಿಂದ ಮುಂದುವರೆಯುತ್ತಿದೆ. ದಾಖಲೆಗಳು, ಮಹತ್ವದ ದಾಖಲೆಪತ್ರಗಳು ಹಾಗೂ ಸಂಪತ್ತಿನ ವಿವರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





