ತೇಪೆ ಹಚ್ಚುವ ಕಾರ್ಯಕ್ಕೆ ಸೀಮಿತವಾದ ರಸ್ತೆಯಿಂದ ವಾಹನ ಸವಾರರಿಗೆ ಕಿರಿಕಿರಿ
ಸಿದ್ದಾಪುರ : 15 ವರ್ಷಗಳಿಂದ ಡಾಂಬರು ಕಾಣದೆ ಕೇವಲ ತೇಪೆ ಹಚ್ಚುವ ಕಾರ್ಯಕ್ಕೆ ಸೀಮಿತವಾದ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳು ನಿರ್ಮಾಣಗೊಂಡು ಸವಾರರು ಸಂಚರಿಸಲು ಪರದಾಡುವಂತಾಗಿದೆ.
ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಸಿದ್ದಾಪುರದಿಂದ ನೆಲ್ಯಹುದಿಕೇರಿಗೆ ತೆರಳುವ ಮುಖ್ಯರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ರಸ್ತೆಯಲ್ಲಿ ಬೃಹತ್ ಗುಂಡಿಗಳು ಸೃಷ್ಟಿಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ಮೂರು ತಿಂಗಳ ಹಿಂದೆ ಈ ರಸ್ತೆಗೆ ತೇಪೆ ಹಚ್ಚುವ ಕಾರ್ಯ ನಡೆದಿತ್ತು. ಬಳಿಕ ಮಳೆಗಾಲ ಆರಂಭವಾಗುತ್ತಿದ್ದಂತೆ ರಸ್ತೆ ಮಧ್ಯೆ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿ ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಸಿದ್ದಾಪುರದಿಂದ ಚೆಟ್ಟಳ್ಳಿ, ಮಡಿಕೇರಿ, ಮರಗೋಡು, ಕುಶಾಲನಗರಕ್ಕೆ ತೆರಳಲು ಇರುವ ಏಕೈಕ ರಸ್ತೆ ಇದಾಗಿದ್ದು, ದಿನಕ್ಕೆ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಕಳೆದ ೧೫ ವರ್ಷಗಳ ಹಿಂದೆ ಕಾವೇರಿ ನದಿಗೆ ಸೇತುವೆ ನಿರ್ಮಾಣ ಸಂದರ್ಭದಲ್ಲಿ ರಸ್ತೆಗೆ ಡಾಂಬರು ಹಾಕಲಾಗಿತ್ತು. ನಂತರದ ಪ್ರತಿ ವರ್ಷ ಕೇವಲ ಗುಂಡಿ ಇದ್ದಲ್ಲಿ ಮಾತ್ರ ಸಣ್ಣದಾಗಿ ಕಾಮಗಾರಿ ನಡೆಸಲಾಗುತ್ತಿರುವುದರಿಂದ ಹೊಂಡಗಳ ಸೃಷ್ಟಿಯಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿಗಳು, ವಯೋವೃದ್ಧರು, ಸಾರ್ವಜನಿಕರು ದಿನಂಪ್ರತಿ ಸಂಚರಿಸುವ ಈ ರಸ್ತೆಗಳಲ್ಲಿ ನಡೆದಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಆಟೋ ಚಾಲನೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಬಡಪಾಯಿಗಳು ದುಡಿದ ಹಣವನ್ನು ಗ್ಯಾರೇಜ್‌ಗೆ ಖರ್ಚು ಮಾಡುವಂತಾಗಿದೆ. ಕಲ್ಲು ಮಿಶ್ರಣವನ್ನಾದರೂ ಹಾಕಿ ತಾತ್ಕಾಲಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಈ ಬಗ್ಗೆ ಗಮನಹರಿಸುತ್ತಿಲ್ಲ. ಓಟ್ ಬ್ಯಾಂಕ್ ದೃಷ್ಟಿಯಿಂದ ಖಾಸಗಿ ರಸ್ತೆ ಅಭಿವೃದ್ಧಿಪಡಿಸುತ್ತಿರುವ ಜನಪ್ರತಿನಿಧಿಗಳು, ಮುಖ್ಯ ರಸ್ತೆಯ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಆಡಳಿತ ವ್ಯವಸ್ಥೆ ಜಾಣ ನಿದ್ರೆಗೆ ಜಾರಿರುವುದಕ್ಕೆ ಹಿಡಿದ ಕೈಗನ್ನಡಿ ಇದಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ರಸ್ತೆಯಲ್ಲಿ ಸೃಷ್ಟಿಯಾಗಿರುವ ಬೃಹತ್ ಹೊಂಡಗಳನ್ನು ತಾತ್ಕಲಿಕವಾಗಿ ಮುಚ್ಚುವ ಕಾಮಗಾರಿ ನಡೆಸಬೇಕು. ಮಳೆಗಾಲ ಮುಗಿದ ಬಳಿಕ ರಸ್ತೆಗೆ ಸಂಪೂರ್ಣ ಡಾಂಬರೀಕರಣ ಮಾಡುವ ಮೂಲಕ ಸಮಸ್ಯೆಗೆ ಹರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





