ಮಡಿಕೇರಿ : ಕೇರಳ ರಾಜ್ಯದಲ್ಲಿ ನಡೆಯುವ ಓಣಂ ಹಬ್ಬವನ್ನು ಮಲಯಾಳಿ ಬಾಂಧವರು ತಮ್ಮತಮ್ಮ ಮನೆಯ ಮುಂಭಾಗದಲ್ಲಿ ಹೂಗಳಿಂದ ರಂಗೋಲಿ ಹಾಕಿ, ಕುಟುಂಬದ ಸದಸ್ಯರೊಂದಿಗೆ ಸಿಹಿ ಹಂಚಿ ಸಂಭ್ರಮದಿಂದ ಶುಕ್ರವಾರ ಆಚರಿಸಿದರು.
ಮಹಾಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಲು ಭೂಲೋಕಕ್ಕೆ ಆಗಮಿಸುವ ದಿನವನ್ನು ಮಲೆಯಾಳಿ ಬಾಂಧವರು ಹಬ್ಬವಾಗಿ ಆಚರಿಸುತ್ತಾರೆ. ಇನ್ನೂ ತಮ್ಮನ್ನು ನೋಡಲು ಆಗಮಿಸುವ ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಸಲುವಾಗಿ ಹೂವಿನಿಂದ ರಂಗೋಲಿಯನ್ನು ಹಾಕಿ ಚಕ್ರವರ್ತಿಯನ್ನು ಸ್ವಾಗತಿಸುತ್ತಾರೆ. ಇದರ ಅಂಗವಾಗಿ ನಗರದ ವಿವಿಧೆಡೆ ಹಾಕಲಾಗಿದ್ದ ಪೂಕಳಂ ದೃಶ್ಯ ಗಮನ ಸೆಳೆಯಿತು. ಓಣಂ ಹಬ್ಬದ ಅಂಗವಾಗಿಯೇ ಮಲೆಯಾಳಿ ಬಾಂಧವರು ರುಚಿರುಚಿಯಾದ ಅಡುಗೆ ತಯಾರಿಸಿ ಸವಿದು, ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಆರ್‌ಎಸ್‌ಎಸ್ ಸೇವಕರಿಂದ ಆಚರಣೆ
ಓಣಂ ಹಬ್ಬದ ಪ್ರಯುಕ್ತ ಮಾದಾಪುರ ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ಸ್ವಾಗತಕ್ಕಾಗಿ ಹೂವಿನ ರಂಗೋಲಿ ಹಾಕುವುದರೊಂದಿಗೆ ಗೌರವ ಸೂಚಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಜಿ ಕಾರ್ಯಕಾರಿಣಿ ಸದಸ್ಯರಾದ ಸುನಿಲ್ ಮಾದಾಪುರ, ಮನೋಜ ಕುಮಾರ್, ಹರೀಶ್, ದೀಪಕ್, ಧನುಷ್, ಪ್ರಸಾದ್, ಅಖಿಲೇಶ್, ನಿತೀಶ್, ಸುಜಿತ್, ಕಾರ್ಯಕರ್ತರು ಹಾಜರಿದ್ದರು.





