ಕೊಡಗು: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವೆಡೆ ಮನೆಗಳು ಹಾನಿಯಾಗಿದ್ದು, ಮಳೆಹಾನಿ ಪ್ರದೇಶಗಳಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಡಿಕೇರಿ, ಕುಶಾಲನಗರ, ಸುಂಟಿಕೊಪ್ಪ ಸೇರಿದಂತೆ ಹಲವೆಡೆ ಮಳೆಗಳು ಹಾನಿಯಾಗಿರುವ ಪ್ರದೇಶಕ್ಕೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.
ಬಳಿಕ ಕಾವೇರಿ ನದಿ ಹರಿಯುವ ಕಣಿವೆ ತೂಗು ಸೇತುವೆ ಸ್ಥಳ ಹಾಗೂ ಕುಶಾಲನಗರ ತಾಲ್ಲೂಕಿನ ರಂಗಸಮುದ್ರ ಬಳಿ ಸೇತುವೆಯ ಪಕ್ಕದಲ್ಲಿ ಮಳೆಯಿಂದ ಕುಸಿತವಾದ ಸ್ಥಳವನ್ನು ವೀಕ್ಷಣೆ ಮಾಡಿ, ಆದಷ್ಟು ಬೇಗ ಇದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಲೋಕೋಪಯೋಗಿ, ನೀರಾವರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.





