ಕೊಡಗು: ಕಾಡಾನೆ ದಾಳಿಗೆ ವೃದ್ಧ ಬಲಿಯಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಬಳಿ ಈ ಘಟನೆ ನಡೆದಿದ್ದು, ಕೊಪ್ಪದ ಮನೆ ನಿವಾಸಿ ರೈತ ಶಿವಣ್ಣ ಎಂಬುವವರೇ ಕಾಡಾನೆ ದಾಳಿಗೆ ಬಲಿಯಾಗಿರುವ ದುರ್ದೈವಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುಂಡಾಟ ಮೆರೆಯುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಇನ್ನು ಈ ಭಾಗದಲ್ಲಿ ಕಾಡಾನೆಗಳು ಪದೇ ಪದೇ ರೈತರ ಮೇಲೆಯೇ ದಾಳಿ ನಡೆಸುತ್ತಿದ್ದು, ಸಂಜೆಯಾದರಂತೂ ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕಾಡಾನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಈ ಭಾಗದ ಸ್ಥಳೀಯರು ಆಗ್ರಹಿಸಿದ್ದಾರೆ.




