ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಿಂದ ಹಿಂದೆಂದೂ ಕಂಡರಿಯದಷ್ಟು ಲಾಭ ಕೊಡಗು ಜಿಲ್ಲೆಗೆ ಆಗಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎನ್.ರವೂಫ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿರೋಧ ಪಕ್ಷಗಳು ಬಜೆಟ್ ನ್ನು ವಿರೋಧಿಸಬೇಕೆಂದೇ ವಿರೋಧಿಸುವುದು ಸರಿಯಲ್ಲ. ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ಹಲವು ಉತ್ತಮ ಕಾರ್ಯಕ್ರಮಗಳನ್ನು ಕೊಡಗು ಜಿಲ್ಲೆಗೆ ನೀಡಲಾಗಿದೆ.
ವಿರಾಜಪೇಟೆಯಲ್ಲಿ 400 ಹಾಸಿಗೆಗಳ ಆಸ್ಪತ್ರೆಯ ನಿರ್ಮಾಣ, ಕುಶಾಲನಗರ ಆಸ್ಪತ್ರೆಯ ಅಭಿವೃದ್ಧಿ, ಮಡಿಕೇರಿ- ದೋಣಿಗಲ್ ನಡುವೆ ಅಂತರಾಷ್ಟಿಯ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರು, ಬುಡಕಟ್ಟು ಜನಾಂಗದವರಿಗೆ ಮೂಲಸೌಕರ್ಯಗಳನ್ನು ಒದಗಿಸಲು 200 ಕೋಟಿ ರೂ. ಮೀಸಲಿಟ್ಟಿರುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಹಣ ಘೋಷಿಸಿರುವುದರಿಂದ ಕೊಡಗು ಜಿಲ್ಲೆಯ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆತಂತ್ತಾಗಿದೆ.
ಈ ಹಿಂದಿನ ಎಲ್ಲಾ ಬಜೆಟ್ ಗಳಿಗಿಂತ ಪ್ರಸ್ತುತ ವರ್ಷ ಮಂಡಿಸಿರುವ ಬಜೆಟ್ ವಿಭಿನ್ನವಾಗಿದ್ದು, ಮುಖ್ಯಮಂತ್ರಿಗಳು ಕೊಡಗು ಜಿಲ್ಲೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಜಿಲ್ಲೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಲಾಭ ದೊರೆಯಲು ಶಾಸಕದ್ವಯರ ನಿರಂತರ ಪ್ರಯತ್ನದ ಫಲವೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.





