ಚೆಟ್ಟಳ್ಳಿ: ಕೊಡಗು ಜಿಲ್ಲೆಯಾದ್ಯಂತ ಕೈಲ್ ಪೊಳ್ದ್ ನಮ್ಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಕೊಡವ ಸಂಪ್ರದಾಯ, ಕುಟುಂಬದ ಒಗ್ಗಟ್ಟು ಹಾಗೂ ಶೌರ್ಯದ ಪ್ರತೀಕವಾದ ಕೈಲ್ ಪೊಳ್ದ್ ನಮ್ಮೆಯನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಬೆಳಿಗ್ಗೆ ಕುಟುಂಬಸ್ಥರು ಐನ್ ಮನೆಯಲ್ಲಿ ಸೇರಿ ಹಿರಿಯರಿಂದ ಆಶೀರ್ವಾದ ಪಡೆದರು. ಬಳಿಕ ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯ ಅವರು ನೆಲ್ಲಕ್ಕಿ ನಡುಬಾಡೆಯಲ್ಲಿ ಕೋವಿ ಹಾಗೂ ಕತ್ತಿಯನ್ನು ಇರಿಸಿ, ಗುರುಕಾರೋಣನಿಗೆ ಮೀದಿ ನೀರಿಟ್ಟು ಪೂಜೆ ಸಲ್ಲಿಸಿದರು. ಕುಲದೇವರಾದ ಇಗ್ಗುತಪ್ಪ, ಕಾವೇರಮ್ಮ ಹಾಗೂ ಕುಟುಂಬದ ಗುರುಕಾರೋಣರು ಎಲ್ಲರಿಗೂ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
ಅಡುಗೆಕೋಣೆಯಲ್ಲಿ ಮಹಿಳೆಯರೂ ಗುರುಕಾರೋಣನಿಗೆ ಮೀದಿ ನೀರಿಟ್ಟು ಪೂಜೆ ಸಲ್ಲಿಸಿದರು. ಹಿರಿಯರಾದ ಪುತ್ತರಿರ ಕಾಶಿ ಸುಬ್ಬಯ್ಯ ಅವರು ಕುಟುಂಬದ ಸದಸ್ಯರಿಗೆ ಆರೋಗ್ಯ, ಐಶ್ವರ್ಯ ಹಾಗೂ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಕೈಲ್ ಪೊಳ್ದ್ ಅಂಗವಾಗಿ ಕುಟುಂಬಸ್ಥರು ಸಾಂಪ್ರದಾಯಿಕ ಭೋಜನ ಸವಿದರು. ಬಳಿಕ ಹಿರಿಯರು, ಕಿರಿಯರು ಹಾಗೂ ಮಕ್ಕಳು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕೊಡವ ಕೋವಿ ಸಂಸ್ಕೃತಿ ಹಾಗೂ ಶೌರ್ಯವನ್ನು ಪ್ರದರ್ಶಿಸಿದರು.
ಕುಟುಂಬದ ಕಾರ್ಯದರ್ಶಿ ಪುತ್ತರಿರ ಸೀತಮ್ಮ ಮೊಣ್ಣಪ್ಪ ವಂದಿಸಿದರು. ನಂತರ ಊರಿನವರು ಮಂದ್ನಲ್ಲಿ ಸೇರಿ ತೆಂಗಿನಕಾಯಿಗೆ ಗುಂಡು ಹೊಡೆದು ಸಂಭ್ರಮಿಸಿದರು. ಪರಸ್ಪರ ಶುಭಾಶಯ ವಿನಿಮಯದೊಂದಿಗೆ ಕೈಲ್ ಪೊಳ್ದ್ ಆಚರಣೆ ಸೌಹಾರ್ದಯುತವಾಗಿ ಮುಕ್ತಾಯಗೊಂಡಿತು.
ಪುತ್ತರಿರ ಐನ್ ಮನೆಯಲ್ಲಿ ನಡೆದ ಆಚರಣೆ ಮೂಲಕ ಹಿರಿಯರಿಗೆ ಗೌರವ, ಕುಟುಂಬದ ಒಗ್ಗಟ್ಟು ಹಾಗೂ ಕೊಡವ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲಾಯಿತು.




