Mysore
29
overcast clouds

Social Media

ಗುರುವಾರ, 03 ಸೆಪ್ಟೆಂಬರ್ 2026
Light
Dark

ಸೆ.21 ರಿಂದ ಮೂರು ದಿನ ವಿಧಾನಮಂಡಲದ ವಿಶೇಷ ಅಧಿವೇಶನ

ಬೆಂಗಳೂರು : ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರಗಾಲದ ಪರಿಸ್ಥಿತಿ, ಕಸ್ತೂರಿ ರಂಗನ್ ವರದಿ ಹಾಗೂ ಇತ್ಯಾದಿ ಪ್ರಮುಖ ಜನಪರ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸಲು ಸೆಪ್ಟೆಂಬರ್ 21 ರಿಂದ ಮೂರು ದಿನಗಳ ಕಾಲ ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಕರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಸಚಿವ ಸಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು, ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ಹೇಳಿದರು.

​ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಗದ್ದಲ ಹಾಗೂ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಕಳೆದ ಮುಂಗಾರು ಅಧಿವೇಶನದಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಯಾವುದೇ ಸರಿಯಾದ ಚರ್ಚೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಸಿ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿದೆ.

​ಅಧಿವೇಶನದಲ್ಲಿ ಚರ್ಚೆಯಾಗಲಿರುವ ಪ್ರಮುಖ ವಿಷಯಗಳು
​ ಕಸ್ತೂರಿ ರಂಗನ್ ವರದಿ
ಡಾ. ಕೆ. ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಲು ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಕುರಿತು ರಾಜ್ಯದ ಆಕ್ಷೇಪಣೆಗಳನ್ನು ಕ್ರೋಢೀಕರಿಸಿ, ಪಶ್ಚಿಮ ಘಟ್ಟ ಭಾಗದ ಜನರ ಬದುಕು, ಕೃಷಿ ಭೂಮಿ ಹಾಗೂ ಮೂಲಸೌಕರ್ಯಕ್ಕೆ ಧಕ್ಕೆಯಾಗದಂತೆ ಕೇಂದ್ರಕ್ಕೆ ಜಂಟಿ ಸದನದ ಮೂಲಕ ಒಮ್ಮತದ ಬಲವಾದ ವಿರೋಧ ವ್ಯಕ್ತಪಡಿಸುವ ಬಗ್ಗೆ ಚರ್ಚೆ ನಡೆಯಲಿದೆ.

​ ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ:
ರಾಜ್ಯದ 101 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದ್ದು, ಹಳ್ಳಿಗಳಲ್ಲಿ ತಲೆದೋರಿರುವ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ತೀವ್ರ ಬಿಕ್ಕಟ್ಟು ಮತ್ತು ಮೇವಿನ ಕೊರತೆ ನೀಗಿಸಲು ಕೈಗೊಳ್ಳಬೇಕಾದ ತುರ್ತು ಪರಿಹಾರ ಕ್ರಮಗಳ ಕುರಿತು ವಿಸ್ತೃತ ಸಂವಾದ ನಡೆಯಲಿದೆ.

​ ಕೇಂದ್ರದ ಬರ ಪರಿಹಾರ ಅನುದಾನ:
ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕಾಗಿ ಬಿಡುಗಡೆಯಾಗಬೇಕಾದ ಅನುದಾನ ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುವುದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಧ್ವನಿ ಎತ್ತಲು ತೀರ್ಮಾನಿಸಲಾಗಿದೆ.

Tags:
error: Content is protected !!