Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೊಡಗಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ

ಕೊಡಗು: ಕರ್ನಾಟಕದ ಕಾಶ್ಮೀರ, ಸುತ್ತಲೂ ಹಸಿರು ರಾಶಿಗಳನ್ನು ಒದ್ದಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣದ ಕಾರ್ಯಗಳು ಭರದಿಂದ ಸಾಗಿದೆ.

ಜಿಲ್ಲೆಗೊಂದು ಕ್ರಿಕೆಟ್‌ ಮೈದಾನ ಬೇಕು ಎನ್ನುವ ಜಿಲ್ಲೆಯ ಕ್ರಿಕೆಟ್‌ ಪ್ರೇಮಿಗಳ ದಶಕಗಳ ಬೇಡಿಕೆಗಳನ್ನು ಕರ್ನಾಟಕ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪೂರೈಸುತ್ತಿದೆ. ಮಡಿಕೇರಿ ತಾಲ್ಲೂಕಿನ ಪಾಲೆಮಾಡು ಗ್ರಾಮದ ಬಳಿ ಅಂತರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ.

50 ಕೋಟಿ ರೂ ವೆಚ್ಚದಲ್ಲಿ ಮೈದಾನ ನಿರ್ಮಾಣವಾಗುತ್ತಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಮೈದಾನದ ಮಾದರಿಯಲ್ಲಿ ಈ ಕ್ರೀಡಾಂಗಣ ಕಟ್ಟಲಾಗುತ್ತಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗಿಂತ ತುಸು ದೊಡ್ಡದಾಗಿರಲಿದೆ. ಮೈದಾನ ನಿರ್ಮಾಣಕ್ಕೆ ಜಿಲ್ಲಾಡಳಿತ 12 ಎಕರೆ ಜಾಗ ಸಹ ನೀಡಿದೆ.

ಮೈದಾನ ನಿರ್ಮಾಣದ ಜಾಗದ ಪಕ್ಕದಲ್ಲೇ ಸ್ಮಶಾನವಿದ್ದರಿಂದ ಅಲ್ಲಿನ ಸ್ಥಳಿಯರು ಮೈದಾನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಿಂದಿನ ಜಿಲ್ಲಾಧಿಕಾರಿ ಡಾ. ಬಿಸಿ ಸತೀಶ್‌ ಶಾಂತಿ ಸಭೆ ಕರೆದು ಮೀಸಲಿದ್ದ ಸ್ಮಶಾನಕ್ಕೆ ಒಂದು ಎಕರೆ ಜಮೀನು ನೀಡುವ ಮೂಲಕ ಮೈದಾನ ನಿರ್ಮಾಣಕ್ಕಿದ್ದ ತೊಡಕುಗಳಿಗೆ ತೆರೆ ಎಳೆದಿದ್ದರು.

ಇದೀಗ ನಿರ್ಮಾಣದ ಕಾಮಗಾರಿಗಳು ಭರದಿಂದ ಸಾಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಕ್ರೀಡಾಂಗಣ ಸಂಪೂರ್ಣವಾಗಿ ಸಿದ್ದವಾಗಲಿದೆ. ಇದರಿಂದ ಜಿಲ್ಲೆಯ ಸ್ಥಳೀಯ ಕ್ರೀಡಾಪಟುಗಳಿಗೂ ಉಪಯೋಗವಾಗಲಿದೆ.

ಕೊಡಗು ಜಿಲ್ಲೆಯಲ್ಲಿ ಅಸ್ಟ್ರೋ ಟರ್ಫ್‌ ಹಾಕಿ ಕ್ರೀಡಾಂಗಣವಿದೆ. ಆದರೆ ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಆಯೋಜಿಸುವಂತಹ ಯಾವುದೇ ಕ್ರೀಡಾಂಗಣವಿಲ್ಲ, ಈ ಮೈದಾನ ನಿರ್ಮಾಣದ ಮುಖಾಂತರ ಜಿಲ್ಲೆಯಲ್ಲಿ ಇನ್ನಿತರ ಕ್ರೀಡೆಗಳ ಕ್ರೀಡಾಗಂಣ ನಿರ್ಮಾಣಕ್ಕೆ ಸಂಸ್ಥೆಗಳು ಒಲವು ತೋರಬೇಕು ಎಂದು ಅಲ್ಲಿನ ಸ್ಥಳೀಯ ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.

Tags: