ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ ಎಂದು ಎಲ್ಲರೂ ಆಶಿಸೋಣ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.
ಶುಕ್ರವಾರ ಮಡಿಕೇರಿಗೆ ಆಗಮಿಸಿದ ಸಂದರ್ಭ ಮಾತನಾಡಿದ ಅವರು, ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ೨೦ ವರ್ಷದಿಂದಲೂ ಸಮಸ್ಯೆ ಇದೆ. ಇದಕ್ಕೆ ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಕಾನೂನಾತ್ಮಕವಾಗಿಯೇ ಪರಿಹರಿಸಬೇಕಿದೆ. ಈ ಬಗ್ಗೆ ಕೊಡಗಿನ ಇಬ್ಬರು ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಸುದೀರ್ಘವಾಗಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂದರ್ಭ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಶೀಘ್ರದಲ್ಲಿಯೇ ಸಭೆಯನ್ನು ಕರೆಯಲಿದ್ದಾರೆ ಎಂದರು.
ಸಿ ಮತ್ತು ಡಿ ಭೂಮಿ ಸಮಸ್ಯೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲೂ ಇದೆ. ಕಾನೂನಾತ್ಮಕವಾಗಿಯೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆ ಬಗೆಹರಿದು ಜನತೆಗೆ ಒಳಿತಾಗಲಿ ಎಂದು ಎಲ್ಲರೂ ಆಶಿಸೋಣ ಎಂದು ಹೇಳಿದರು.