ನಾಪೋಕ್ಲು : ಬಿರುಸಿನ ಮಳೆಯ ನಡುವೆ ಇತ್ತೀಚೆಗೆ ವಿವಾಹವಾಗಿದ್ದ ವಧುವನ್ನು ಕುಟುಂಬಸ್ಥರು ತವರು ಮನೆಗೆ ತೆಪ್ಪದ ಮೂಲಕ ಕರೆದುಕೊಂಡು ಹೋದ ಘಟನೆ ಗುರುವಾರ ನಡೆದಿದೆ.
ಕೊಡಗಿನಾದ್ಯಂತ ಬಿರುಸಿನ ಮಳೆಯಾಗಿದ್ದು, ನಾಪೋಕ್ಲು ವ್ಯಾಪ್ತಿಯ ಹಲವೆಡೆ ರಸ್ತೆಗಳು ಜಲಾವೃತವಾಗಿ ರಸ್ತೆ ಸಂಪರ್ಕ ಕಡಿತಗೊಂಡಿವೆ. ಇಂತಹ ಬಿರುಸಿನ ಮಳೆಯ ನಡುವೆ ಇಲ್ಲಿಯ ಚೆರಿಯಪರಂಬುವಿನ ವರ ಹಾಗೂ ಮಡಿಕೇರಿಯ ವಧುವಿನ ವಿವಾಹ ಸಮಾರಂಭ ಜರುಗಿದೆ. ಕಳೆದ ವಾರ ಮಡಿಕೇರಿಯಲ್ಲಿ ಮದುವೆ ಕಾರ್ಯಕ್ರಮ ಜರುಗಿದ ಬಳಿಕ ವಧುವನ್ನು ಇಲ್ಲಿಯ ಚೆರಿಯಪರಂಬುವಿನ ವರನ ಮನೆಗೆ ಕಳುಹಿಸಿಕೊಡಲಾಗಿತ್ತು.
ಹಿಂತಿರುಗಿ ತವರು ಮನೆಗೆ ಕರೆದುಕೊಂಡು ಹೋಗುವ ಸಂಪ್ರದಾಯದಂತೆ ಗುರುವಾರ ವಧುವಿನ ಮನೆಯವರು ವಧುವನ್ನು ಕರೆದುಕೊಂಡು ಹೋಗಲು ವರನ ಮನೆಗೆ ಆಗಮಿಸುವಾಗ ಮಳೆ, ಪ್ರವಾಹದಿಂದಾಗಿ ನಾಪೋಕ್ಲು – ಚೆರಿಯಪರಂಬು ರಸ್ತೆ ಪ್ರವಾಹದಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಪರ್ಯಾಯ ಮಾರ್ಗವಾಗಿ ತೆಪ್ಪ ತರಿಸಿ ತೆಪ್ಪದ ಮೂಲಕ ಪ್ರವಾಹದ ನೀರಿನಲ್ಲಿ ಸಾಗಿದ್ದಾರೆ. ಆ ಮೂಲಕ ಚೆರಿಯಪರಂಬುವಿನಲ್ಲಿರುವ ವರನ ಮನೆ ತಲುಪಿ ಕಾರ್ಯಕ್ರಮದ ಬಳಿಕ ವಧುವನ್ನು ತವರು ಮನೆಗೆ ಕರೆದುಕೊಂಡು ಹೋಗುವ ಸಂಪ್ರದಾಯ ಪಾಲಿಸಲು ಮಹಿಳೆಯರು, ಮಕ್ಕಳು ತೆಪ್ಪದಲ್ಲಿ ಸಾಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.
ಭಾರೀ ಮಳೆ : ತೆಪ್ಪದ ಸಹಾಯದಿಂದ ವಧುವನ್ನು ಕರೆದುಕೊಂಡ ಹೋದ ಕುಟುಂಬಸ್ಥರು.!





