ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾಕ್ಕೆ ಅದ್ಧೂರಿ ತೆರೆಬಿದ್ದಿದ್ದು, ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಈ ಬಾರಿ ಶ್ರೀ ಕೋಟೆ ಮಹಾಗಣಪತಿ ಹಾಗೂ ಕೋಟೆ ಶ್ರೀ ಮಾರಿಯಮ್ಮ ದೇವಾಲಯಗಳ ಮಂಟಪಗಳು ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಮಂಟಪಕ್ಕೆ ದ್ವಿತೀಯ ಹಾಗೂ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಮಂಟಪಕ್ಕೆ ತೃತೀಯ ಬಹುಮಾನ ದೊರಕಿದೆ.
ಗುರುವಾರ ರಾತ್ರಿ ೯ ಗಂಟೆಯಿಂದಲೇ ದಶಮಂಟಪಗಳ ಪ್ರದರ್ಶನಗಳು ಆರಂಭಗೊಂಡವು. ಪೇಟೆ ಶ್ರೀ ರಾಮ ಮಂದಿರ ದೇವಾಲಯ ಮಂಟಪ ಪ್ರಥಮ ಪ್ರದರ್ಶನ ನೀಡುತ್ತಿದ್ದಂತೆ ಉಳಿದ ಮಂಟಪಗಳು ಕೂಡ ದಶಮಂಟಪ ಸಮಿತಿ ನಿಗದಿಪಡಿಸಿದ್ದ ಸ್ಥಳಕ್ಕೆ ಆಗಮಿಸಿ ಪ್ರದರ್ಶನ ನೀಡಲು ಆರಂಭಿಸಿದವು. ಚಲನವಲಗಳನ್ನೊಳಗೊಂಡ ವಿಭಿನ್ನ ಕಲಾಕೃತಿಗಳ ಕಥಾಹಂದವನ್ನು ಮಂಟಪಗಳಲ್ಲಿ ಪ್ರಸ್ತುತಪಡಿಸಲಾಯಿತು. ನೂಕು ನುಗ್ಗಲಿನ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರದರ್ಶನವನ್ನು ಕಣ್ತುಂಬಿಕೊಂಡರು.
ಇದನ್ನು ಓದಿ : ಮೈಸೂರು ದಸರಾ: ಆರನೇ ಬಾರಿ ಅಂಬಾರಿ ಹೊತ್ತು ಸಾಗುತ್ತಿರುವ ಅಭಿಮನ್ಯು
ವಿಘ್ನರಾಜನಿಂದ ಮಮತಾಸುರ ವಧೆ ಎಂಬ ಪೌರಾಣಿಕ ಕಥಾ ಸಾರಂಶವನ್ನು ಮಂಟಪದಲ್ಲಿ ಅಳವಡಿಸಿ ಪ್ರದರ್ಶನ ನೀಡಿದ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಹಾಗೂ ಉಗ್ರನರಸಿಂಹನ ಉಗ್ರತ್ವ ಶಮನ ಎಂಬ ಕಥಾ ಹಂದರವನ್ನು ಮಂಟಪದಲ್ಲಿ ಅಳವಡಿಸಿ ಪ್ರದರ್ಶನ ನೀಡಿದ ಶ್ರೀ ಕೋಟೆ ಮಾರಿಯಮ್ಮ ದೇವಾಲಯಗಳು ಜಂಟಿಯಾಗಿ ಪ್ರಥಮ ಬಹುಮಾನ ಪಡೆದವು. ಪರಶುರಾಮನ ಕಥೆ ಪ್ರದರ್ಶಿಸಿದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ದ್ವಿತೀಯ ಬಹುಮಾನ ಪಡೆದರೆ, ಅಂಧಕಾಸುರನ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಿದ್ದ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ತೃತೀಯ ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು.
ರಾತ್ರಿಯಾಗುತ್ತಿದ್ದಂತೆ ಹೊರಜಿಲ್ಲೆ, ಹೊರ ರಾಜ್ಯದಿಂದ ಜನರು ನಗರದಲ್ಲಿ ಜಮಾವಣೆಗೊಂಡರು. ನಗರಕ್ಕೆ ವಾಹನ ಪ್ರವೇಶ ನಿರ್ಬಂಧಿಸಿದ್ದರಿಂದ ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ನಗರದತ್ತ ಹೆಜ್ಜೆ ಹಾಕಿದರು. ಇಡೀ ರಾತ್ರಿ ನಗರದಲ್ಲಿ ನಡೆದ ದಶಮಂಟಪಗಳ ಶೋಭಾಯತ್ರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ದೇವಾನುದೇವತೆಗಳಿಂದ ಅಸುರರ ಸಂಹಾರದ ಕಥಾ ಹಂದರಗಳು ನೋಡುಗರಿಗೆ ದೇವಲೋಕವೇ ಧರೆಗಿಳಿದಂತೆ ಭಾಸವಾಯಿತು.





