ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಧಾರಾಕಾರ ಮಳೆಯಿಂದ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕಾವೇರಿ, ಲಕ್ಷ ಣ ತೀರ್ಥ ಸೇರಿದಂತೆ ನದಿ ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಲವೆಡೆ ಗದ್ದೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ವಿವಿಧೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲ ವ್ಯಾಪ್ತಿಯಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ಮತ್ತೊಮ್ಮೆ ಭರ್ತಿಯಾಗಿದೆ.
ಕೊಂಡಂಗೇರಿಯಿಂದ ಅಮ್ಮತ್ತಿ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೊಟ್ಟಮುಡಿ ಜಂಕ್ಷನ್ ಬಳಿ ರಸ್ತೆಯಲ್ಲಿ ನೀರು ವ್ಯಾಪಿಸಿದೆ. ಪೊನ್ನಂಪೇಟೆ ಹೋಬಳಿಯ ಕಾನೂರು ಗ್ರಾಮದ ರಸ್ತೆಯು ಜಲಾವೃತಗೊಂಡಿದೆ. ನಾಪೋಕ್ಲು-ಚೆರಿಯಪರಂಬು ರಸ್ತೆ ಜಲಾವೃತವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಮೂರ್ನಾಡು-ಅಮ್ಮತ್ತಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ.
ಎಮ್ಮೆಮಾಡುವಿನಲ್ಲಿ ಕಾವೇರಿ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ದೋಣಿಕಡವು ವ್ಯಾಪ್ತಿಯಲ್ಲಿಯೂ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಗದ್ದೆಗಳು ಜಲಾವೃತಗೊಂಡಿವೆ. ಎಡಪಾಲ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಮೀಪದ ತೋಟಗಳಿಗೆ ನೀರು ನುಗ್ಗಿದೆ. ಕಡಂಗ ಪಾರಾಣೆ ಮುಖ್ಯರಸ್ತೆಯ ಬೆಳ್ಳುಮಾಡುವಿನಲ್ಲಿಯೂ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಕ್ಕಬ್ಬೆ-ವಿರಾಜಪೇಟೆ ರಸ್ತೆಯಲ್ಲಿಯೂ ಪ್ರವಾಹ ವ್ಯಾಪಿಸಿದೆ.
ಎಮ್ಮೆಮಾಡು ಗ್ರಾಮದ ಕದಿಸಮ್ಮ ಎಂಬವರ ವಾಸದ ಮನೆಯ ಅಡುಗೆ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದು, ಹಾನಿಯಾಗಿದೆ. ಹಾಗೂ ಮನೆಯ ಗೋಡೆ ಬಿರುಕು ಬಿಟ್ಟಿದೆ. ಕಿರುಂದಾಡು ಗ್ರಾಮದ ದೇವಜನ ಪುಷ್ಪವೇಣಿ ಅವರ ವಾಸದ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ. ಅರಪಟ್ಟು ಗ್ರಾಮದ ಜುನೈದ್ ಅವರ ವಾಸದ ಮನೆ ಪಕ್ಕದಲ್ಲಿ ಬರೆ ಜರಿದು ಮನೆಯ ಹಿಂಭಾಗ ಮಣ್ಣು ಕುಸಿದಿದೆ.
ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ರಸ್ತೆ ಕಾವೇರಿ ನದಿ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದು, ಅಂದಾಜು ರಸ್ತೆಯ ಮೇಲೆ ೪ ಅಡಿಗಳಷ್ಟು ನೀರು ಹರಿಯುತ್ತಿದೆ. ಈ ಸಂಬಂಧ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಅಪಾಯದ ಸ್ಥಳಗಳಿಗೆ ತೆರಳದಂತೆ ಹಾಗೂ ಆ ಭಾಗದ ಜನರಿಗೆ ಕಾಳಜಿ ಕೇಂದ್ರಕ್ಕೆ ಬರುವಂತೆ ಸೂಚಿಸಿದರು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯ ಮಳೆ ವಿವರ
ಕಳೆದ ೨೪ ಗಂಟೆಗಳ ಅವಽಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೯೨.೫೫ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ೭೯ ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ ೧೩೦.೧೦ ಮಿ.ಮೀ., ಪೊನ್ನಂಪೇಟೆ ತಾಲ್ಲೂಕಿನಲ್ಲಿ ೧೪೧.೨೯ ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ ೯೮.೪೫ ಮಿ.ಮೀ., ಕುಶಾಲನಗರ ತಾಲ್ಲೂಕಿನಲ್ಲಿ ೧೩.೯೦ ಮಿ.ಮೀ. ಸರಾಸರಿ ಮಳೆಯಾಗಿದೆ. ಮಡಿಕೇರಿ ಕಸಬಾ ೩೬, ನಾಪೋಕ್ಲು ೧೫೬.೬೦, ಸಂಪಾಜೆ ೩೪, ಭಾಗಮಂಡಲ ೮೯.೪೦, ವಿರಾಜಪೇಟೆ ೧೪೯.೨೦, ಅಮ್ಮತ್ತಿ ೧೧೧, ಹುದಿಕೇರಿ ೨೨೬.೭೦, ಶ್ರೀಮಂಗಲ ೨೧೭.೪೦, ಪೊನ್ನಂಪೇಟೆ ೭೦, ಬಾಳೆಲೆ ೫೧.೦೭, ಸೋಮವಾರಪೇಟೆ ೮೦.೮೦, ಶನಿವಾರಸಂತೆ ೬೮, ಶಾಂತಳ್ಳಿ ೧೭೨, ಕೊಡ್ಲಿಪೇಟೆ ೭೩, ಕುಶಾಲನಗರ ೪.೬೦, ಸುಂಟಿಕೊಪ್ಪ ದಲ್ಲಿ ೨೩.೨೦ ಮಿ.ಮೀ. ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ
ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿ
ಇಂದಿನ ನೀರಿನ ಮಟ್ಟ ೨೮೫೧ ಅಡಿ
ಕಳೆದ ವರ್ಷ ಇದೇ ದಿನ ೨೮೩೦.೬೨ ಅಡಿ
ನೀರಿನ ಒಳಹರಿವು ೭೬೮೯ ಕ್ಯೂಸೆಕ್ಸ್
ನೀರಿನ ಹೊರ ಹರಿವು ೮೫೪೧ ಕ್ಯೂಸೆಕ್ಸ್





