ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು
ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಮಹಿಳೆಯನ್ನು ಭೇಟಿಯಾಗಲು ಮಂಡ್ಯದಿಂದ ಕೊಡಗಿಗೆ ಬಂದ ವ್ಯಕ್ತಿಯೊಬ್ಬನನ್ನು ರಾತ್ರಿಯಿಡೀ ಕೋಣೆಯೊಂದರಲ್ಲಿ ಕೂಡಿ ಹಾಕಿ ಹಣಕ್ಕಾಗಿ ಮೂವರು ಹಲ್ಲೆ ನಡೆಸಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಯುವಕ ಪೊಲೀಸರಿಗೆ ದೂರು ನೀಡಿದ್ದು, ಇದೊಂದು ಹನಿಟ್ರ್ಯಾಪ್ ಜಾಲದ ಕೃತ್ಯವಿರಬಹುದೆಂದು ಶಂಕಿಸಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಹದೇವ್ ಹಲ್ಲೆಗೊಳಗಾದ ವ್ಯಕ್ತಿ. ಈತನಿಗೆ ಫೇಸ್‌ಬುಕ್‌ನಲ್ಲಿ ಮಡಿಕೇರಿಯ ಮಹಿಳೆಯೊಬ್ಬರ ಪರಿಚಯವಾಗಿತ್ತು. ಆ ಮಹಿಳೆಯ ಭೇಟಿಗಾಗಿಯೇ ಮಡಿಕೇರಿಗೆ ಬಂದಿದ್ದ. ಒಂಟಿಯಾಗಿ ಬಂದಿದ್ದ ಮಹದೇವ್‌ನನ್ನು ಮೂವರು ಕರೆದೊಯ್ದು ಮಡಿಕೇರಿಯ ಮಂಗಳಾದೇವಿ ನಗರದ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು ಎನ್ನಲಾಗಿದೆ.
ಹಣಕ್ಕಾಗಿ ಬೇಡಿಕೆ ಇರಿಸಿದ್ದ ಮೂವರು, ರಾತ್ರಿಯೆಲ್ಲಾ ಮಹದೇವ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಣ ನೀಡುವಂತೆ ಮಹದೇವ್‌ಗೆ ಒತ್ತಡ ಹೇರಿದ್ದಾರೆ. ಮೂವರಿಂದ ಮಹದೇವ್ ತಪ್ಪಿಸಿಕೊಂಡು ಅರೆಬೆತ್ತಲೆಯಾಗಿ ಮನೆಯಿಂದ ಹೊರಗೆ ಬಂದಿದ್ದು, ಮಹದೇವ್‌ನನ್ನು ಬೆನ್ನಟ್ಟಿದ ಮೂವರು ಆಟೋದಲ್ಲಿ ಅಪಹರಣ ಮಾಡಲು ಮುಂದಾಗಿದ್ದಾರೆ. ಅಪಹರಣಕ್ಕೆ ಯತ್ನಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಇದನ್ನೂ ಓದಿ:-ಯುನಿಟಿ ಮಾಲ್ ನಿರ್ಮಾಣಕ್ಕೆ ವಿರೋಧ ಇಲ್ಲ : ಸಂಸದ ಯದುವೀರ್
ಅಲ್ಲಿಂದಲೂ ಮೂವರಿಂದ ತಪ್ಪಿಸಿಕೊಂಡ ಮಹದೇವ್, ಮಡಿಕೇರಿ ನಗರ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಹದೇವ್ ಹೇಳಿದ ಸ್ಥಳಕ್ಕೆ ಪೊಲೀಸರು ಭೇಟಿ ನೀಡುವಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಮಹದೇವ್ ಹಲ್ಲೆಗೆ ಬಳಸಲಾಗದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದೊಂದು ಹನಿಟ್ರ್ಯಾಪ್ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಪ್ರಕರಣದ ಸಂಪೂರ್ಣ ಮಾಹಿತಿ ನೀಡುವುದಾಗಿ ಎಸ್‌ಪಿ ಕೆ. ರಾಮರಾಜನ್ ತಿಳಿಸಿದ್ದಾರೆ.




