Mysore
33
few clouds

Social Media

ಶನಿವಾರ, 14 ಮಾರ್ಚ್ 2026
Light
Dark

ಕೊಡಗು| 13 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಮೂರನೇ ಬಲಿ: ಕಾಫಿ ಬೆಳೆಗಾರ ದಾರುಣ ಸಾವು

ಕೊಡಗು: ಕೊಡಗಿನಲ್ಲಿ ಕಾಡಾನೆ – ಮಾನವ ಸಂಘರ್ಷ ಅವ್ಯಾಹತವಾಗಿ ಮುಂದುವರೆದಿದ್ದು ಕಾಫಿ ಬೆಳೆಗಾರರೊಬ್ಬರು ಹತರಾಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಹಳೇ ಸಿದ್ದಾಪುರದ ಕಾಫಿ ಬೆಳೆಗಾರ ಚೌರಿರ ಗಣಪತಿ (ಗಪ್ಪಿ) ಎಂಬುವವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದಿಢೀರ್ ದಾಳಿ ಮಾಡಿರುವ ಕಾಡಾನೆ ಅವರ ಜೀವವನ್ನು ಅಹುತಿ ಪಡೆದಿದೆ.

ಆ ಮೂಲಕ ಕೊಡಗಿನಲ್ಲಿ ಕೇವಲ 13 ದಿನಗಳ ಅವಧಿಯಲ್ಲಿ ಆನೆ ದಾಳಿಗೆ ಅಮಾಯಕ ಮೂರನೇ ಜೀವ ಬಲಿ ಆಗಿದೆ. ಈ ಘಟನೆ ಮಾನವ-ಪ್ರಾಣಿ ಸಂಘರ್ಷದ ತೀವ್ರತೆಯನ್ನು ಎತ್ತಿ ತೋರಿಸುತ್ತಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಎಂಬಾಕೆ ದಾರುಣವಾಗಿ ಬಲಿಯಾಗಿದ್ದಳು. ಆ ಘಟನೆ ನಡೆದ 10ನೇ ದಿನಕ್ಕೆ ವಾಲ್ನೂರಿನಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಕಾಡಾನೆಗೆ ಜೀವ ತೆತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಿದ್ದು, ರಾಜ್ಯದ ಹಲವೆಡೆ ಪ್ರಾಣಿ ದಾಳಿಯಿಂದ ನೂರಾರು ಮಂದಿ ಸಾಯುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕೊಡಗು, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, 33 ಸಾವುಗಳೊಂದಿಗೆ ಕೊಡಗು ಜಿಲ್ಲೆ ಈ ಪಟ್ಟಿಯಲ್ಲಿ ಎರಡನೇಯ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಮೇಲಿಂದ ಮೇಲೆ ಕಾಡು ಪ್ರಾಣಿಗಳ ದಾಳಿಗೆ ಜನರು ಬಲಿಯಾಗುತ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Tags:
error: Content is protected !!