ಕೊಡಗು: ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಕಾಫಿ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿವೆ.
ವಿರಾಜಪೇಟೆ ಬೆಳ್ಳರಿಮಾಡು ಗ್ರಾಮದ ಪುಟ್ಟಿಚಂದ ಪದ್ಮಿನಿ ಮುದ್ದಪ್ಪರವರ ಕಾಫಿ ತೋಟಕ್ಕೆ ನುಗ್ಗಿದ ನಾಲ್ಕು ಕಾಡಾನೆಗಳು ಬೆಳೆಯನ್ನು ಸಂಪೂರ್ಣ ನಾಶ ಮಾಡಿವೆ. ಕಾಡಾನೆಗಳ ಹಿಂಡು ಕಳೆದ ಕೆಲ ದಿನಗಳಿಂದ ತೀವ್ರ ಹಾನಿ ಮಾಡುತ್ತಿದ್ದು, ಗ್ರಾಮಸ್ಥರು ಭಾರೀ ಆತಂಕದಲ್ಲಿದ್ದಾರೆ.
ಕಳೆದ 15 ದಿನಗಳಿಂದಳೂ ಕಾಡಾನೆಗಳ ಈ ಹಿಂಡು ಗ್ರಾಮದಲ್ಲಿ ಓಡಾಡುತ್ತಿದ್ದು, ಅರಣ್ಯ ಇಲಾಖೆ ಇವುಗಳನ್ನು ಓಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ತೀವ್ರ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಆನೆಗಳ ದಾಳಿ ತಪ್ಪಿಸುವಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದು, ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.