Mysore
28
broken clouds

Social Media

ಭಾನುವಾರ, 17 ಮೇ 2026
Light
Dark

ಕೋಟೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಆಯ್ಕೆ ಖಚಿತ?

ಮಂಜು ಕೋಟೆ

ಎಚ್.ಡಿ.ಕೋಟೆ: ಬಿಜೆಪಿ ಘಟಕದ ತಾಲ್ಲೂಕು ಅಧ್ಯಕ್ಷ ಹಿರೇಹಳ್ಳಿ ಶಂಭುಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣೂರು ಟಿ. ವೆಂಕಟೇಶ್ ಆಯ್ಕೆಯಾಗುವುದು ಖಚಿತವಾಗಿದೆ.

ಹಿರೇಹಳ್ಳಿ ಶಂಭುಗೌಡ ಕೆಲವೊಂದು ಕಾರಣಗಳಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು  ಜಿಲ್ಲಾಧ್ಯಕ್ಷರಾದ ಕುಂಬ್ರಳ್ಳಿ ಸುಬ್ಬಣ್ಣವರಿಗೆ ಕಳೆದ ವಾರ ಸಲ್ಲಿಸಿದ್ದಾರೆ. ೨ ವರ್ಷಗಳ ಹಿಂದೆ ಕೋಟೆ ಮತ್ತು ಸರಗೂರು ತಾಲ್ಲೂಕುಗಳಿಗೆ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಶಂಭುಗೌಡ ಮತ್ತು ಗುರುಸ್ವಾಮಿ ಅವರನ್ನು ಪಕ್ಷದ ವರಿಷ್ಠರು ಮತ್ತು ಮುಖಂಡರುಗಳ ಮೂಲಕ ನೇಮಕ ಮಾಡಿಸಲು ಕೃಷ್ಣನಾಯಕ ಮುಂದಾಗಿದ್ದರು.

ಮೂರು ಜನರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ನಡೆದು ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ತೋರಿಸಿ ಎರಡನೇ ಸ್ಥಾನ ಪಡೆದು ಜಾ.ದಳ ಸೋಲು ಕಂಡಿತ್ತು. ಶಂಭುಗೌಡ ಪಕ್ಷದ ಸಂಘಟನೆ ಮತ್ತು ಕೆಲಸ ಕಾರ್ಯವನ್ನು ನಡೆಸುತ್ತಿದ್ದರು. ಕೆಲವೊಂದು ಕಾರಣಗಳಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕುತೂಹಲ ಮೂಡಿಸಿದೆ.

ತೆರವಾಗಿರುವ ಈ ಸ್ಥಾನಕ್ಕೆ ಒಕ್ಕಲಿಗ ಸಮುದಾಯದವರಿಗೆ ಆದ್ಯತೆ ನೀಡಬೇಕೆಂದು ಪಕ್ಷದ ವರಿಷ್ಠರು, ಮುಖಂಡರು ಚರ್ಚಿಸುತ್ತಿದ್ದು, ಅಣ್ಣೂರು ಗ್ರಾಮದ ಹಿರಿಯ ಮುಖಂಡ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಟಿ. ವೆಂಕಟೇಶ್‌ರವರು ಮುಂಚೂಣಿಯಲ್ಲಿದ್ದು, ಅವರು ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ತಾಪಂ ಸದಸ್ಯರಾಗಿ, ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಸಕ್ರಿಯವಾಗಿ ಕೆಲಸ ನಿರ್ವಹಿಸಿರುವುದರಿಂದ ಇವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮೈಸೂರು ಜಿಲ್ಲೆಗೆ ಪಕ್ಷದ ಉಸ್ತುವಾರಿಯಾಗಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡರವರು, ಜಿಲ್ಲೆಯ ಮತ್ತು ತಾಲ್ಲೂಕಿನ ಪ್ರಮುಖರ ಜೊತೆ ಸಭೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಬಿಜೆಪಿ ಕೆಲಸ ನಿರ್ವಹಿಸುತ್ತಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ತಾಪಂ, ಜಿಪಂ, ಗ್ರಾಪಂ ಚುನಾವಣೆಗಳು ಬರುವುದರಿಂದ ಸೂಕ್ತವಾದವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಅನಿವಾರ್ಯತೆ ಇರುವುದರಿಂದ ಜಿಲ್ಲಾಧ್ಯಕ್ಷರು, ಉಸ್ತುವಾರಿಗಳು, ಪಕ್ಷದ ಪ್ರಮುಖ ಮುಖಂಡರುಗಳಿಗೆ ಸವಾಲಾಗಿದೆ.

Tags:
error: Content is protected !!