Columbus
-3
overcast clouds

Social Media

ಬುಧವಾರ, 21 ಜನವರಿ 2026
Light
Dark

ಕಾಡುಪ್ರಾಣಿಗಳಿಂದ ನಿರಂತರ ಬೆಳೆ ಹಾನಿ : ಅರಣ್ಯಾಧಿಕಾರಿಗಳೊಂದಿಗೆ ಗ್ರಾಮಸ್ಥರ ಸಭೆ

ಕುಶಾಲನಗರ : ಆನೆ ಮತ್ತು ಮಾನವ ಸಂಘರ್ಷ, ಕಾಡು ಪ್ರಾಣಿಗಳ ಉಪಟಳ ನಿಗ್ರಹ ಸಂಬಂಧ ನಂಜರಾಯಪಟ್ಟಣ ಗ್ರಾ.ಪಂ.ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿಯ ಸಭೆ ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.

ಗ್ರಾ.ಪಂ. ವ್ಯಾಪ್ತಿಯಲ್ಲಿ ವನ್ಯಜೀವಿಗಳಿಂದ ಉಂಟಾಗುತ್ತಿರುವ ಅನಾಹುತಗಳು ಮತ್ತು ಬೆಳೆಹಾನಿ ತಡೆಗಟ್ಟಲು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರಥಮ ಸಭೆಯಲ್ಲಿ ಉಪವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾಮಟ್ಟದ ಅಧಿಕಾರಿಗಳ ಕಚೇರಿಗೆ ನಿಯೋಗ ತೆರಳುವ ನಿರ್ಧಾರದ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ರಕ್ಷಿತ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾ.ಪಂ.ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರು ಹಾಗೂ ಬೆಳೆಗಾರರು ಅರಣ್ಯಾಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ತಿಳಿಸಿದರು.

ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟ ರೂಪಿಸಲು ೧೧ ಮಂದಿ ಒಳಗೊಂಡ ಹೋರಾಟ ಸಮಿತಿಯನ್ನು ರಚಿಸಲಾಗಿದೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಶಾಸಕರು, ಸಂಸದರು, ರೈತ ಮುಖಂಡರ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಕಾಡಾನೆಗಳ ಹಾವಳಿ ಒಳಗೊಂಡಂತೆ,ಕಾಡು ಹಂದಿ, ಮುಳ್ಳುಹಂದಿ, ನವಿಲು, ಮಂಗ, ಕೆಂಜರಿಗಳ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಉಂಟಾಗುತ್ತಿದೆ. ಹುಲಿ ಕಾಟ ಕೂಡ ಹೆಚ್ಚಾಗಿದೆ. ಸೋಲಾರ್ ಫೆನ್ಸಿಂಗ್, ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಅವೈಜ್ಞಾನಿಕವಾಗಿದ್ದು ಪರಿಣಾಮಕಾರಿಯಾಗಿಲ್ಲ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಪ್ರಶ್ನೆಗಳು,ಬೇಡಿಕೆಗಳನ್ನು ಆಲಿಸಿದ ಅರಣ್ಯಾಽಕಾರಿ ಸಮಸ್ಯೆ ಇತ್ಯರ್ಥಕ್ಕೆ ಕಾಲವಕಾಶ ನೀಡಬೇಕು.ಶಾಶ್ವತ ಪರಿಹಾರ ಕಷ್ಟಸಾಧ್ಯ, ಕಾನೂನಿನ ಚೌಕಟ್ಟಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆ ಕ್ರಮವಹಿಸಲಿದೆ ಎಂದು ವಲಯ ಅರಣ್ಯಾಧಿಕಾರಿ ರಕ್ಷಿತ್ ತಿಳಿಸಿದರು.

ಮುಂದಿನ ಒಂದು ತಿಂಗಳ ಒಳಗಾಗಿ ನಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಸಭೆಯಲ್ಲಿ ಗ್ರಾಪಂ ಸದಸ್ಯ ಕೆ.ವಿ.ಪ್ರೇಮಾನಂದ, ಮಾಜಿ ಸದಸ್ಯ ಸುಮೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಚಿನ್ ನಿಂಬಾಳ್ಕರ್, ಡಿ.ಜಿ.ಜಗದೀಶ್, ಹೋರಾಟ ಸಮಿತಿ ಸದಸ್ಯರಾದ ಉಮೇಶ್, ವಿ.ಕೆ.ಸಚಿನ್, ಕೆಮ್ಮಾರನಾ ಲೋಕನಾಥ್, ಐಯಂಡ್ರ ಬಾಲಕೃಷ್ಣ ಇತರರು ಭಾಗವಹಿಸಿದ್ದರು.

Tags:
error: Content is protected !!