ಮಡಿಕೇರಿ: ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಮೀಸಲು ಅರಣ್ಯದ ಕೂಪಾಡಿ ಹಾಡಿಯ ತಮ್ಮಣ್ಣ ಕುಟುಂಬಕ್ಕೆ ಅರಣ್ಯ ಇಲಾಖೆಯು 15 ಲಕ್ಷ ರೂ ಪರಿಹಾರದ ಚೆಕ್ ನೀಡಿದೆ.
ಮೃತ ತಮ್ಮಣ್ಣ ತಾಯಿ ಬೋಜಿ ಅವರಿಗೆ ಅರಣ್ಯಾಧಿಕಾರಿಗಳು ಚೆಕ್ ವಿತರಿಸಿದರು. ಈ ವೇಳೆ ಪರಿಹಾರ ಹಣವನ್ನು ಉತ್ತಮ ಕಾರ್ಯಕ್ಕೆ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅರಣ್ಯ ಇಲಾಖೆ ಸಿಬ್ಬಂದಿ, ಈ ಹಾಡಿಯು ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಕಾಡಾನೆಗಳ ಬಗ್ಗೆ ಎಚ್ಚರ ವಹಿಸಬೇಕು. ಮೀಸಲು ಅರಣ್ಯದೊಳಗೆ ತಿರುಗಾಡಬಾರದು. ಕಾಡಾನೆ ಕಂಡಾಗ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಮಾನವರ ಮೇಲೆ ದಾಳಿ ಮಾಡುವ ಕಾಡಾನೆಗಳನ್ನು ಹಿಡಿದು ಪಳಗಿಸಲಾಗುವುದು. ಅಂತಹ ಆನೆಗಳನ್ನು ಕಂಡು ಹಿಡಿದು ಸೆರೆಹಿಡಿಯಲಾಗುವುದು ಎಂದು ಹೇಳಿದರು.





