Light
Dark

ಚಾ.ನಗರ, ಮಂಡ್ಯ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ನೂತನ ವಿವಿ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು : ರಾಜ್ಯದಲ್ಲಿ ಒಟ್ಟು ಎಂಟು ಜಿಲ್ಲೆಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000ರ ತಿದ್ದುಪಡಿಗಾಗಿ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ತಿಳಿಸುವ ಮೂಲಕ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ರವರು ರಾಜ್ಯಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಸಚಿವ ಸಂಪುಟ ಒಪ್ಪಿಗೆ ನೀಡಿರುವಂತೆ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಸಂಕಲ್ಪ ಮಾಡಲಾಗಿದ್ದು ಶೈಕ್ಷಣಿಕ ವಲಯದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಬಿಜೆಪಿ ಸರ್ಕಾರ ಸದಾ ಬದ್ಧವಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಯಾವ ಜಿಲ್ಲೆಗಳಲ್ಲಿ ನೂತನ ವಿವಿ ಸ್ಥಾಪನೆ

1) ಚಾಮರಾಜನಗರ: ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಚಾಮರಾಜನಗರದ ಕಾಲೇಜುಗಳು ಮೊದಲಿನಿಂದಲೂ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಇದ್ದವು. ಕ್ರಮೇಣ ಇಲ್ಲಿ ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಸ್ನಾತಕೋತ್ತರ ಕೇಂದ್ರವೊಂದನ್ನು ಸ್ಥಾಪಿಸಲಾಗಿತ್ತು. ಈಗ ಈ ಜಿಲ್ಲೆಯ ಸರ್ವಾಂಗಿನ ಅಭಿವೃದ್ಧಿಯ ನಿಟ್ಟಿನಲ್ಲಿ ನೂತನ ವಿಶ್ವವಿದ್ಯಾಲಯವನ್ನೇ ಆರಂಭಿಸಲಾಗುತ್ತಿದೆ ಇದರ ವ್ಯಾಪ್ತಿಗೆ ಜಿಲ್ಲೆಯಲ್ಲಿರುವ 18 ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ.

2) ಮಂಡ್ಯ : ಮಂಡ್ಯ ಜಿಲ್ಲೆಯು ಇದುವರೆಗೆ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿತ್ತು. ಇತ್ತೀಚಿಗೆ ಇಲ್ಲಿನ ಸರ್ಕಾರಿ ಕಾಲೇಜನ್ನು ಏಕೀಕೃತ ವಿಶ್ವವಿದ್ಯಾಲಯ ಆಗಿ ಮಾಡಲಾಗಿತ್ತು. ಈಗ ಜಿಲ್ಲೆಯ ವ್ಯಾಪ್ತಿಗೆ ನೂತನ ವಿಶ್ವವಿದ್ಯಾಲಯವನ್ನು ಆರಂಭಿಸಲಾಗುತ್ತಿದೆ ಇದರಡಿಯಲ್ಲಿ ಜಿಲ್ಲೆಯ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ.

3) ಕೊಡಗು : ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿದ್ದ ಕೊಡಗು ಜಿಲ್ಲೆಯನ್ನು ಇನ್ನು ಮುಂದೆ ಸ್ವತಂತ್ರವಾದ ಪ್ರತ್ಯೇಕ ವಿಶ್ವವಿದ್ಯಾಲಯ ಆಗಿ ಮೈದಾಳಲಿದೆ. ಇದರಡಿಯಲ್ಲಿ 24 ಕಾಲೇಜುಗಳು ಬರಲಿವೆ.

4) ಹಾಸನ : ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿದ್ದ ಹಾಸನದಲ್ಲಿ ಮೂರು ದಶಕಗಳಿಂದಲೂ ಹೇಮಗಂಗೋತ್ರಿ ಎನ್ನುವ ಹೆಸರಿನ ಸ್ನಾತಕೋತ್ತರ ಕೇಂದ್ರ ಮಾತ್ರವೇ ಇತ್ತು.ಈಗ ಇಲ್ಲೂ ಒಂದು ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ಇದರ ವ್ಯಾಪ್ತಿಯಲ್ಲಿ 36 ಕಾಲೇಜುಗಳು ಕಾರ್ಯನಿರ್ವಹಿಸಲಿವೆ.

ಇನ್ನುಳಿದಂತೆ  ಕೊಪ್ಪಳ ಹಾವೇರಿ ಬೀದರ್ ಬಾಗಲಕೋಟೆಯಲ್ಲಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಲಿವೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ