ಸೋಮವಾರಪೇಟೆ : ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲೆಲ್ಲೂ ಜಾತಿ ಮೇಳೈಸಿದೆ ಎಂದು ಸ್ವತಂತ್ರ ಬಸವಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ಬೃಹತ್ ರಾಷ್ಟ್ರದ ಭಾರತ ಮಾತೆ ಎಲ್ಲಾ ಜಾತಿ, ಜನಾಂಗದವರನ್ನು ತನ್ನೊಡಲಲ್ಲಿ ಇಟ್ಟುಕೊಂಡು ಸಲಹುತಿದ್ದಾಳೆ. 12ನೆ ಶತಮಾನದಲ್ಲೂ ಬಸವಣ್ಣರಾದಿಯಾಗಿ ಎಲ್ಲಾ ಶಿವಶರಣರು ಜಾತೀಯ ವಿರುದ್ಧ ಹೋರಾಡಿ ಎಲ್ಲಾರು ಒಂದೇ ಎಂದು ಪ್ರತಿಪಾದಿಸಿದರು. ಆದರೆ ಇಂದು ಏನಾಗಿದೆ ಎಲ್ಲೆಲ್ಲೂ ಜಾತಿ ಮೇಳೈಸಿದೆ ಎಲ್ಲಾ ರಂಗಗಳಲ್ಲೂ ಜಾತಿ, ಜಾತಿ ಎಂದು ವಿಷಾದಿಸಿದರು.
ಸಮಾಜವನ್ನು ತಿದ್ದಿ, ತೀಡಬೇಕಾದ ಧಾರ್ಮಿಕ ಕ್ಷೇತ್ರವು ಇದಕ್ಕೆ ಹೊರತಾಗಿಲ್ಲ. ಈ ದೇಶದ ಸಂಸ್ಕತಿ, ಆಚಾರ, ವಿಚಾರಗಳನ್ನು ಪಾಲಿಸುತ್ತಿರುವುದು, ಉಳಿಸುತ್ತಿರುವುದು, ಮಾತೆ ಭಾರತಾಂಬೆಗೆ ಗೌರವ ಸಲ್ಲಿಸುತ್ತಿರುವುದು ಭಾರತೀಯ ಜನತಾ ಪಕ್ಷ. ಆದ್ದರಿಂದ ನಾನು ಅಭಿಮಾನಿಯಾಗಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ನಮ್ಮ ಸಮಾಜದಲ್ಲಿ ಗುರುಗಳಿಗೆ ವಿಶೇಷವಾದ ಗೌರವ ಹಾಗೂ ಸ್ಥಾನವಿದೆ. ನಾವುಗಳು ಏನಾದರೂ ಸಾಧಿಸಬೇಕಾದರೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂದು ಹೇಳಿದರು.
ಗುರು ಪೂರ್ಣಿಮೆಯ ಅಂಗವಾಗಿ ಸೋಮೇಶ್ವರ ದೇವಾಲಯದ ಅರ್ಚಕ ಚಿತ್ರಕುಮಾರ್ ಭಟ್, ನಿವೃತ್ತ ಶಿಕ್ಷರಾದ ತಂಗಮ್ಮ, ನಿವೃತ್ತ ಸೈನಿಕರಾದ ಚಂದ್ರಕುಮಾರ್, ಯೋಗ ಶಿಕ್ಷಕರಾದ ಪ್ರದೀಪ್‌ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮಾದಪ್ಪ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರುಪಾಕ್ಷ ಸೇರಿದಂತೆ ಹಲವರು ಉಪಸ್ತಿತರಿದ್ದರು.





