ಕೊಡಗು: ಚಿರತೆ ದಾಳಿಗೆ ಕರು ಬಲಿ

ಸಿದ್ದಾಪುರ: ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮದ ಅಸ್ಥಾನ ಹಾಡಿಯಲ್ಲಿ ಇಂದು ( ಜುಲೈ 9 ) ಚಿರತೆ ದಾಳಿಗೆ ಒಂದೂವರೆ ವರ್ಷದ ಕರು ಬಲಿಯಾಗಿದೆ.

ಹಾಡಿಯ ಜಯ ಎಂಬವರಿಗೆ ಸೇರಿದ ಕರು ಮನೆಯ ಸಮೀಪ ಮೇಯುತ್ತಿದ್ದಾಗ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಚಿರತೆ ದಾಳಿಯಿಂದ ಸುತ್ತಮುತ್ತಲ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆರ್.ಆರ್.ಟಿ. ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಚಿರತೆಯ ಚಲನವಲನ ಕಂಡುಹಿಡಿಯುಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ವನ್ಯಮೃಗಗಳ ಹಾವಳಿಯಿಂದ ಈ ವ್ಯಾಪ್ತಿಯ ಜನರು ಸಮಸ್ಯೆ ಎದುರಿಸುವಂತಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.