ಹಾರಂಗಿಯಿಂದ 1 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ!

ಕೊಡಗು: ಜಿಲ್ಲೆಯ ಕುಶಾಲನಗರದ ಹಾರಂಗಿ ಜಲಾಶಯದಿಂದ ಒಂದು ಸಾವಿರ ಕ್ಯೂಸೆಕ್‌ ನೀರನ್ನು ಮಂಗಳವಾರ (ಜುಲೈ. 9) ಬಿಡುಗಡೆ ಮಾಡಿದ್ದಾರೆ.

ಕಳೆದ ಎರಡು-ಮೂರು ದಿನಗಳಿಂದ ಬೆಂಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಲಾಶಯಕ್ಕೆ ಅಧಿಕ ಮಟ್ಟದ ನೀರು ಹರಿದು ಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದೆ.

ಇಂದು ಸಂಜೆ 4 ಕ್ರಸ್ಟ್‌ ಗೇಟ್‌ಗಳನ್ನು ತೆಗೆದು ಹಾರಂಗಿ ಜಲಾಶಯದಿಂದ ಒಂದು ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.

ಜಲಾಶಯ ತುಂಬಲು ಇನ್ನು ಕೇವಲ 10 ಅಡಿಗಳ ಅವಶ್ಯಕತೆಯಿದೆ. ಈಗಾಗಲೇ ಜಿಲ್ಲೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು, ನದಿ ತಟದ ಜನರೆಲ್ಲಾ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ಹೊರಡಿಸಿತ್ತು. ಇದರ ಬೆನ್ನಲ್ಲೇ ಮಳೆ ತೀವ್ರತೆ ಪಡೆದುಕೊಂಡ ಹಿನ್ನೆಲೆ ಹಾರಂಗಿ ಜಲಾಶಯ ಭರ್ತಿಯಾಗುವ ಮುನ್ನವೇ ನೀರನ್ನು ಹೊರಬಿಡಲಾಗಿದೆ.

ಹವಾಮಾನ ಇಲಾಖೆ ವರದಿ ಪ್ರಕಾರ ಕೊಡಗು ಜಿಲ್ಲೆಯಾದ್ಯಂತ ವಾಡಿಕೆಗಿಂತ ಅಧಿಕ ಮಳೆ ಬರುವ ಮುನ್ಸೂಚನೆ ನೀಡಲಾಗಿದ್ದು, ಎನ್‌ಡಿಆರ್‌ಎಫ್‌ ತಂಡ ಹಾಗೂ ಜಿಲ್ಲಾಡಳಿತ ಪ್ರವಾಹ ತಡೆಗಟ್ಟಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ:

ಗರಿಷ್ಠ ಮಟ್ಟ: 2,848.76 ಅಡಿ
ಇಂದಿನ ಮಟ್ಟ: 2,849.30 ಅಡಿ
ನಿನ್ನೆ ಮಟ್ಟ: 2,848.76 ಅಡಿ
ಒಳ ಹರಿವು: 2,121 ಕ್ಯೂಸೆಕ್‌
ಹೊರ ಹರಿವು: 700 ಕ್ಯೂಸೆಕ್‌