ಹಾರಂಗಿ ಬಳಿಯ ೪೦ ಎಕರೆ ಜಾಗದಲ್ಲಿ ಶಿಬಿರ ಆರಂಭ: ೧೫ ಆನೆಗಳಿಗೆ ಆಶ್ರಯ
ಕುಶಾಲನಗರ: ಸುಂದರ ಪರಿಸರ, ಹಾರಂಗಿ ಹಿನ್ನೀರಿನಲ್ಲಿ ಕೊಡಗಿನ ೩ನೇ ಸಾಕಾನೆ ಶಿಬಿರ ಶನಿವಾರ ಲೋಕಾರ್ಪಣೆಗೊಂಡಿತು.
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಶಿಬಿರವನ್ನು ಉದ್ಘಾಟಿಸಿದರು. ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಆಹಾರ ತಿನ್ನಿಸಲಾಯಿತು. ಉದ್ಘಾಟನಾ ಕಾರ್ಯಕ್ರಮ ಅಂಗವಾಗಿ ಶಿಬಿರದಲ್ಲಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಅರಣ್ಯ ಇಲಾಖೆಯ ೪೦ ಎಕರೆ ಜಾಗದಲ್ಲಿ ಸಾಕಾನೆ ಶಿಬಿರ ಆರಂಭಿಸಲಾಗಿದೆ. ೧೫ ಆನೆಗಳನ್ನು ದುಬಾರೆಯಿಂದ ಹಾರಂಗಿಗೆ ಕರೆತರುವ ಕೆಲಸ ಮಾಡಲಾಗುತ್ತಿದೆ. ಇಲ್ಲಿಯೂ ಪ್ರವಾಸಿಗರ ಭೇಟಿಗೆ ಅನುವು ಮಾಡಿಕೊಡಲಾಗುತ್ತದೆ. ಹಾರಂಗಿಗೆ ಬರುವ ಪ್ರವಾಸಿಗರು ಸಾಕಾನೆಗಳ ವೀಕ್ಷಣೆ ಮಾಡಬಹುದಾಗಿದೆ ಎಂದರು.
ಪ್ರಾಣಿ ದಯಾ ಸಂಘದ ಆಕ್ಷೇಪದ ಹಿನ್ನೆಲೆ ಆನೆ ಸಫಾರಿ ಮಾಡಬಾರದೆಂದು ಸುಪ್ರಿಂ ಕೋರ್ಟ್ ಆದೇಶ ಇರುವುದರಿಂದ ಸಫಾರಿಗೆ ಅವಕಾಶ ನೀಡಿಲ್ಲ. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಮಾತನಾಡಿ ಆನೆ ಸಫಾರಿಗೆ ಅವಕಾಶ ಕಲ್ಪಿಸಲು ಒತ್ತಾಯ ಮಾಡಲಾಗುತ್ತದೆ. ಆನೆ ಸಫಾರಿಯಿಂದ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ. ಅರಣ್ಯ ಇಲಾಖೆಗೂ ಆದಾಯ ದೊರಕುತ್ತದೆ.
ಸಿಸಿಎಫ್ ನಿರಂಜನ ಮೂರ್ತಿ ಮಾತನಾಡಿ, ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಾರಂಗಿ ಬಳಿ ಮತ್ತೊಂದು ಸಾಕಾನೆ ಶಿಬಿರವನ್ನು ಲೋಕಾರ್ಪಣೆಗೊಳಿಸಲಾಗಿದೆ. ಕಳೆದ ೨ ವರ್ಷಗಳಿಂದ ಅಗತ್ಯ ತಯಾರಿ ಮಾಡಿಕೊಂಡು ಎಲ್ಲಾ ಮೂಲಭೂತ ಸೌಲಭ್ಯದೊಂದಿಗೆ ಆನೆ ಶಿಬಿರವನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಕಾನೆ ಶಿಬಿರ ಹಾಗೂ ವೃಕ್ಷೆದ್ಯಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಬಿ.ಸಿ.ಸತೀಶ್, ಡಿಎಫ್‌ಒ ಪೂವಯ್ಯ, ಕುಶಾಲನಗರ ಪಪಂ ಅಧ್ಯಕ್ಷ ಜೈವರ್ಧನ್, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್‌ನಾಯಕ್, ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರ, ಡಿವೈಎಸ್ಪಿ ಗಂಗಾಧರ್, ಸಿಐ ಮಹೇಶ್, ಎಸಿಎಫ್ ಗೋಪಾಲ್, ಆರ್‌ಎಫ್‌ಒ ಶಿವರಾಂ ಮತ್ತಿತರರು ಇದ್ದರು.