Mysore
25
overcast clouds
Light
Dark

ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಿರುವ ಸರ್ಕಾರದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಮುಂದಾದ ಜನ ಸಂಗ್ರಾಮ ಪರಿಷತ್

ಮೈಸೂರು: ಸರ್ಕಾರಿ ಭೂಮಿಯ ಕಬಳಿಕೆಯನ್ನು ತಡೆಯಲು ಜಾರಿಗೆ ತಂದಿದ್ದ ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಭೂಗಳ್ಳರಿಗೆ ಅನುಕೂಲ ಮಾಡಲಾಗಿದೆ. ಹೀಗಾಗಿ ಕಾಯ್ದೆಯ ತಿದ್ದುಪಡಿ ಮಾಡಿರುವ ಸರ್ಕಾರದ ವಿರುದ್ಧ ಉಚ್ಚ ನ್ಯಾಯಾಲಯದ ಪ್ರಕರಣ ದಾಖಲಿಸಲು ಜನ ಸಂಗ್ರಾಮ ಪರಿಷತ್ ತೀರ್ಮಾನಿಸಿದೆ.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಒಂಭತ್ತೂವರೆ ಲಕ್ಷ ಎಕರೆಯ ಭಾರೀ ಪ್ರಮಾಣದಲ್ಲಿ ಸರ್ಕಾರದ ಕಂದಾಯ ಭೂಮಿ ಒತ್ತುವರಿಯಾಗದೆ ಎಂದು ಎ.ಟಿ.ರಾಮಸ್ವಾಮಿ ಅವರ ನೇತೃತ್ವದಲ್ಲಿ ಶಾಸನಸಭೆಯ ಜಂಟಿ ಸದನ ಸಮಿತಿ ಹತ್ತು ವರ್ಷಗಳ ಹಿಂದೆಯೇ ಪತ್ತೆ ಹಚ್ಚಿತ್ತು ಮತ್ತು ಇದಷ್ಟೆ ಅಲ್ಲ ರಾಜ್ಯಾದ್ಯಂತ ಮೂರೂವರೆ ಲಕ್ಷ ಎಕರೆ ಅರಣ್ಯ ಭೂಮಿ, ಗೋಮಾಳಗಳು, ಕೆರೆಕುಂಟೆಗಳು ವಿಶೇಷವಾಗಿ ಅಮೃತ್ ಮಹಲ್ ಕಾವಲು ಭೂಮಿ ಕೂಡ ಸರ್ಕಾರದ ಭೂಮಿಯಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಬಿ.ಬಾಲಸುಬ್ರಹ್ಮಮಣಿಯನ್ ನೇತೃತ್ವದಲ್ಲಿ ರಚಿಸಲಾಗಿದ್ದ ಸರ್ಕಾರಿ ಜಮೀನುಗಳ ಕಾರ್ಯಪಡೆ ಗುರುತಿಸಿತ್ತು.

ಬಳಿಕ ಜಂಟಿ ಸದನ ಸಮಿತಿ ಮತ್ತು ಕಾರ್ಯ ಪಡೆಗಳ ಶಿಫಾರಸ್ಸಿನನ್ವಯ ಭೂ ಕಬಳಿಕೆ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಲಾಗಿತ್ತು. ಈ ಕಾಯ್ದೆಗೆ ಎಳ್ಳು ನೀರು ಬಿಟ್ಟು ಭೂ ಕಬಳಿಕೆ ಮಾಫಿಯವನ್ನು ರಕ್ಷಿಸಲು ಹೊರಟಿರುವ ರಾಜ್ಯದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕಟ್ಟುವಾಗಿ ಖಂಡಿಸಿದರು.

ಈ ಕಾಯ್ದೆಯ ತಿದ್ದುಪಡಿಯ ಪ್ರಕಾರ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಪರಿಮಿತಿಯಿಂದ ೧೮ ಕಿ.ಮೀ ಒಳಗನಿನ ಭೂಮಿ ಮತ್ತು ರಾಜ್ಯ ಎಲ್ಲ ನಗರ ಪಾಲಿಕೆ ೧೦ ಕಿ.ಮೀ.ಒಳಗಿನ ಭೂಮಿ ಮತ್ತು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಒಳಗಿನ ೩ ಕಿ.ಮೀ.ವ್ಯಾಪ್ತಿಯ ಒಳಗಿನ ಸರ್ಕಾರಿ ಭೂಮಿಯನ್ನು ಹೊರತುಪಡಿಸಿ ಇತರೆ ೧೦ ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಭೂಮಿಯನ್ನು ಭೂ ಕಬಳಿಕೆದಾರರಿಗೆ ಅಕ್ರಮವಾಗಿ ಪರಭಾರೆ ಮಾಡಲು ಭೂ ಕಬಳಿಕೆಗೆ ಅನುಕೂಲವಾಗಿದೆ. ಈ ಕಾಯ್ದೆಯಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಕುಂಟು ನೆಪ ಹೇಳಿ ಸರ್ಕಾರದ ಭಷ್ಟ್ರ ಅಧಿಕಾರಿಗಳು ಮತ್ತು ಎಲ್ಲ ಪಕ್ಷದ ರಾಜಕೀಯ ನಾಯಕರು ಭೂಮಿಯನ್ನು ಲಪ್ಪಾಟಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಈ ತಿದ್ದುಪಡಿಯು ಈ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಮಾರ್ಕಾಂಡಯ್ಯ ಕಡ್ಜ್ ಅವರು ತೀರ್ಪಿನ ಅನ್ವಯ ದೇಶದ ಸಾಮಾಜಿಕ ಒಡೆತನದಲ್ಲಿ ಇರುವ ಗೋಮಾಳ, ಗೋ ಕಟ್ಟೆ, ಕೆರೆಕುಂಟೆ ಇತ್ಯಾದಿ ಪರಭಾರೆ ಮಾಡುವ ಅಧಿಕಾರ ಸರ್ಕಾರಕ್ಕೂ ಇಲ್ಲ ಎಂದಿದೆ. ಆದರೆ, ರಾಜ್ಯ ಸರ್ಕಾರ ಈ ತೀರ್ಪಿಗೆ ತದ್ವಿರುದ್ದವಾಗಿ ಕಾಯ್ದೆ ತಿದ್ದುಪಡಿ ಮಾಡಿದೆ. ಈಗಾಗಲೇ ಈ ಅನ್ಯಾಯವನ್ನು ಪ್ರತಿಭಟಿಸಿ ಜನತಂತ್ರ್ಮಾಕ ಮತ್ತು ಕಾನೂನು ಹೋರಾಟಕ್ಕೆ ಜ ಸಂಗ್ರಾಮ ಪರಿಷತ್ ಸಿದ್ಧತೆ ನಡೆಸಿದ್ದು, ಉಚ್ಚ ನ್ಯಾಯಾಲಯದ ದಾವೆ ಹೂಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ಲಾಸ್ಟಿಕ್ ನಿಷೇಧವನ್ನು ಕಠಿಣವಾಗಿ ಜಾರಿಗೊಳಿಸಿ: ದೇಶದಲ್ಲಿ ಮತ್ತು ರಾಜ್ಯದಲ್ಲಿ ಹಲವು ಪ್ರಕಾರದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿರ್ಷೇಧಿಸಲಾಗಿದೆ. ಆದರೆ, ಮೈಸೂರು ನಗರ ಒಳಗೊಂಡಂತೆ ರಾಜ್ಯದೆಲ್ಲೆಡೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳಾದ ಕ್ಯಾರಿಬ್ಯಾಗ್ ಕವರ್‌ಗಳು, ಪ್ಲಾಸ್ಟಿಕ್ ಪ್ಲೇಟ್‌ಗಳು, ಪ್ಲಾಸ್ಟಿಕ್ ಕೋಟೆಡ್ ಪೇಪರ್ ಕಪ್, ನಾನ್ ಒಪನ್ ಕ್ಯಾರಿಬ್ಯಾಗ್, ಧ್ವಜ, ಪ್ಲೆಕ್ಸ್, ಎಸ್‌ಯುಪಿ ಪ್ಲಾಸ್ಟಿಕ್ ಕಂಟೈನರ್ ಬಳಕೆ ಎಗ್ಗಿಲ್ಲದೆ ಸಾಗುತ್ತಿದೆ. ಇದರಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಕಿಡಿಕಾರಿದರು.

ಸಾಮಾನ್ಯವಾಗಿ ತರಕಾರಿ ಅಂಗಡಿಗಳಲ್ಲೂ ತೆಳು ರೀತಿಯ ಕವರ್‌ಗಳನ್ನು ಬಳಸುತ್ತಿದ್ದು, ದೊಡ್ಡ ಹೋಟೆಲ್‌ಗಳಲ್ಲಿ ಪಾರ್ಸಲ್‌ಗಳಿಗಾಗಿ ಪ್ಲಾಸ್ಟಿಕ್ ಕೋಟೆಡ್ ಪೇಪರ್ ಪ್ಲೇಟ್‌ಗಳು ಹಾಗೂ ಪಾರ್ಸಲ್ ಹಾಳೆಗಳು ಯತ್ತೆಚ್ಛವಾಗಿ ಬಳಸಲ್ಪಡುತ್ತಿದೆ. ಜಿಲ್ಲಾಡಳಿತ ಮತ್ತು ನಗರಪಾಲಿಕೆ ಅಧಿಕಾರಿಗಳು ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇವುಗಳು ಕಂಡು ಕಾಣದಂತೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಜನ ಸಂಗ್ರಾಮ್ ಪರಿಷತ್ ಸಂಬಂಧಪಟ್ಟ ಇಲಾಖೆಗಳಿಗೆ ಚುರುಕು ಮುಟ್ಟಿಸುವ ಹೋರಾಟ ಮಾಡಲು ನಿರ್ಣಯ ಮಾಡಿದೆ. ಜೊತೆ ಮಹತ್ವದ ಎರಡು ವಿಷಯಗಳ ಕುರಿತು ಜನ ಜಾಗೃತಿ ಮಾಡಿಸಲು ಮುಂದಾಗುತ್ತಿದೆ ಎಂದು ಹೇಳಿದರು.

ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಮಾತನಾಡಿ, ಪ್ಲಾಸ್ಟಿಕ್ ನಿಷೇಧಕ್ಕೆ ಕಡಿವಾಣ ಹಾಕಿಸಲು ಹೋರಾಟ ನಡೆಸುತ್ತಿರುವ ಕಂಸಾಳೆ ರವಿ ಮತ್ತು ರಮೇಶ್ ಕುಮಾರ್ ಮಾಲಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಇದರ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಜನ ಸಂಗ್ರಾಮ್ ಪರಿಷತ್ ಹಂಗಾಮಿ ರಾಜ್ಯ ಅಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಗೀತಾ ವೇಲುಮಣಿ, ಕಂಸಾಳೆ ರವಿ, ರಮೇಶ್ ಕುಮಾರ್ ಮಾಲಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ