ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮಕ್ಕೆ ಚಿತ್ರನಟ ಡಾಲಿ ಧನಂಜಯ ಅವರು ಭೇಟಿ ನೀಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಹಾರ ಹಾಕಿ ಗೌರವ ಸಲ್ಲಿಸಿದರು.
ಸೋಮವಾರ ಕೊಳ್ಳೇಗಾಲ ಪಟ್ಟಣಕ್ಕೆ ತಮ್ಮ ನಟನೆಯ ಯಡ್‌ಬುಸ್ ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ್ದರು. ನಂತರ ಹೊನ್ನೂರು ಗ್ರಾಮಕ್ಕೆ ಭೇಟಿ ನೀಡಿದಾಗ ಅಭಿಮಾನಿಗಳು ಪಟಾಕಿ ಸಿಡಿಸಿ, ಡಾಲಿ ಡಾಲಿ ಎಂದು ಕೂಗಿ ಸಂಭ್ರಮಿಸಿದರು. ನಂತರ ಧನಂಜಯ್ ಅವರನ್ನು ಮುಖಂಡರು, ಯುವಕರು ಸನ್ಮಾನಿಸಿದರು.

ಇದೇ ವೇಳೆ ಮಾತನಾಡಿದ ಧನಂಜಯ್, ಗ್ರಾಮದಲ್ಲಿ ನಿರ್ಮಿಸಿರುವ ಬೃಹತ್ ಅಂಬೇಡ್ಕರ್ ಪ್ರತಿಮೆಯನ್ನು ವೀಕ್ಷಿಸಬೇಕೆಂಬ ಉದ್ದೇಶದಿಂದ ಆಗಮಿಸಿದ್ದೇನೆ. ಪ್ರತಿಮೆ ನೋಡಿ ಖುಷಿಯಾಯಿತು ಎಂದರು.
ಈ ಹಿಂದೆ ಚಿತ್ರನಟರಾದ ಚೇತನ್ ಅಹಿಂಸಾ, ದುನಿಯಾ ವಿಜಯ್ ಅವರು ಗ್ರಾಮಕ್ಕೆ ಭೇಟಿ ನೀಡಿ ಅಂಬೇಡ್ಕರ್ ಪ್ರತಿಮೆ ವೀಕ್ಷಿಸಿ ಗೌರವ ಸಮರ್ಪಣೆ ಮಾಡಿದ್ದರು.





