ಹಾಸನ: ರಾಜ್ಯದ ಹಲವೆಡೆ ಮಳೆಯ ಅಬ್ಬರ ಜೋರಾಗಿದ್ದು, ಹಾಸನದ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದೆ.
ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಕಳೆದ ಒಂದು ವಾರದಿಂದಲೂ ಧಾರಾಕಾರ ಮಳೆಯಾಗುತ್ತಿದ್ದು, ಜನತೆ ಹೈರಾಣಾಗಿದ್ದಾರೆ. ಸಕಲೇಶಪುರದಲ್ಲಿ ವರುಣನ ಅಬ್ಬರ ಜೋರಾಗಿದ್ದು, ರಾಷ್ಟ್ರೀಯ ಹೆದ್ದಾರಿ 75ರ ಹೆಗ್ಗದ್ದೆ ಬಳಿ ನಿರಂತರವಾಗಿ ಭೂಕುಸಿತ ಉಂಟಾಗಿದೆ.
ಇನ್ನು ಸಕಲೇಶಪುರ ಪಟ್ಟಣದ ಹೊರ ವಲಯದ ಬೈಪಾಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತವಾಗಿದೆ. ರಸ್ತೆಯ ಸುರಕ್ಷತೆಗಾಗಿ ನಿರ್ಮಿಸಲಾಗಿದ್ದ ತಡೆಗೋಡೆಗೂ ಸಂಪೂರ್ಣ ಹಾನಿಯಾಗಿದೆ.
ಸಕಲೇಶಪುರದ ಹಲವಡೆ ಭಾರೀ ಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗಿದ್ದು, ಹಲವು ಮನೆಗಳ ಗೋಡೆಗಳು ಹಾಗೂ ಶಾಲೆಯ ಗೋಡೆ ಸಹ ಕುಸಿತವಾಗಿದೆ. ಮಳೆ ಇನ್ನೂ ಎರಡು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.





