ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ, ಸುರೇಶ್‌ಗೆ ನೋಟಿಸ್ ಕೊಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನಮ್ಮನ್ನು ಅವರು ಕರೆಯಬಾರದಿತ್ತು. ನಾವೆಲ್ಲಾ ವಿವರವಾಗಿ ಇಡಿಗೆ ಕೊಟ್ಟಿದ್ದು, ಇಡಿಯವರು ಚಾರ್ಜ್‌ಶೀಟ್‌ನಲ್ಲಿ ನಮ್ಮ ಹೆಸರೇನು ಸೇರಿಸಿಲ್ಲ. ನಮ್ಮ ಹೇಳಿಕೆ ತೆಗೆದುಕೊಂಡು ಬಿಟ್ಟಿದ್ದರು. ಈಗ ಈ ಹಂತದಲ್ಲಿ ಕರೆದಿರುವುದು ನನಗೆ ಗೊತ್ತಿಲ್ಲ. ಆದರೆ ನಾನು ಹೋಗುತ್ತೇನೆ ಎಂದು ಹೇಳಿದರು.
ಇನ್ನು ಕಾರ್ಟಿಯರ್ ವಾಚ್ ವಿಚಾರವಾಗಿ, ಯಾರು ಶರ್ಟ್ ಹಾಕ್ತಾರೆ, ಯಾರು ವಾಚ್ ಹಾಕ್ತಾರೆ, ಯಾರು ಕನ್ನಡಕ ಹಾಕುತ್ತಾರೆ ಇವೆಲ್ಲವನ್ನು ನಾನು ಪ್ರಶ್ನೆ ಮಾಡಲ್ಲ. ಇವೆಲ್ಲ ಅವರ ವೈಯಕ್ತಿಕ ವಿಚಾರಗಳು. ಅವರ ಆಸೆಗಳು. ಕೆಲವರು ಒಂದು ಸಾವಿರ ಶೂ ಹಾಕ್ತಾರೆ. ಕೆಲವರು ಹತ್ತು ಸಾವಿರ ಶೂ ಹಾಕ್ತಾರೆ. ಕೆಲವರು ಒಂದು ಲಕ್ಷದ ಶೂ ಹಾಕ್ತಾರೆ. ನಾನು ಒಂದು ಸಾವಿರದ ವಾಚು ಕಟ್ತೀನಿ. ಅದು ನನ್ನ ಆಸ್ತಿ, ಸಂಪಾದನೆ, ನನ್ನ ಕಷ್ಟ, ನನ್ನ ಶ್ರಮ ಎಂದು ಹೇಳಿದರು.





