ಹಾಸನ: ಹಾಸನಾಂಬೆ ಜಾತ್ರೆಯಲ್ಲಿ ಯಾವುದೇ ರೀತಿಯ VIP ಪ್ರತಿಷ್ಠೆಗೆ ಮಣೆ ಹಾಕದೆ, ಶ್ರೀಸಾಮಾನ್ಯರ ದರ್ಶನಕ್ಕೆ ಆದ್ಯತೆ ನೀಡಿದ ಸರ್ಕಾರದ ಪ್ರಯತ್ನದ ಯಶಸ್ಸಿಗೆ ಸಹಕರಿಸಿದ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದರು.
ಹಾಸನಾಂಬ ದೇವಿ ಮತ್ತು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾನು ಕಳೆದ ವರ್ಷವೂ ದರ್ಶನ ಪಡೆದಿದ್ದೆ. ಈ ವರ್ಷವೂ ದರ್ಶನ ಪಡೆದಿದ್ದೇನೆ. ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿಗಾಗಿ, ಮಳೆ- ಬೆಳೆ-ರೈತರ ಸಮೃದ್ಧಿಗಾಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಇದನ್ನು ಓದಿ: ಹಾಸನಾಂಬೆ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಈ ಬಾರಿ ಅಗತ್ಯಕ್ಕಿಂತ ಹೆಚ್ವು ಮಳೆ ಬಿದ್ದು ರೈತರಿಗೆ ಆಗಿರುವ ನಷ್ಟ ಭರಿಸಲು NDRF ನಿಧಿ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರ ನೀಡುತ್ತಿದ್ದೇವೆ. ಹಿಂದೆಂದೂ ಯಾರೂ ನೀಡದಷ್ಟು ಬೆಳೆ ಹಾನಿ ಪರಿಹಾರವನ್ನು ನಾವು ನೀಡಿದ್ದೇವೆ. ಮುಂದಿನ ವರ್ಷ ಬೆಳೆ ಹಾನಿ ಪರಿಸ್ಥಿತಿ ಬರದಿರಲಿ ಎಂದು ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ನಮ್ಮದು ಕುವೆಂಪು ಅವರ ಆಶಯದ “ಸರ್ವ ಜನಾಂಗದ ಶಾಂತಿಯ ತೋಟ” ಆಗಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸೋಣ. ಎಲ್ಲಾ ಧರ್ಮದ ದೇವರ ಆಶಯವೂ ಮನುಷ್ಯ ಪ್ರೀತಿ ಮತ್ತು ಸೌಹಾರ್ದದ ಬದುಕು. ಇದಕ್ಕೆ ತಕ್ಕಂತೆ ನಾವೆಲ್ಲರೂ ಸಹೃದತೆಯಿಂದ ಮನುಷ್ಯ ಧರ್ಮವನ್ನು ಪಾಲಿಸಬೇಕು ಎಂದರು.





