ಹಾಸನ: ದೇವಾಲಯದ ಕಬ್ಬಿಣದ ಬಾಗಿಲು ತೆರೆದು ಕಲ್ಲಿನ ಗಣೇಶ ಮೂರ್ತಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿರುವ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಸಾರಿಗೆ ಬಸ್ ನಿಲ್ದಾಣ ಮುಂಭಾಗವಿರುವ ಬೇಲೂರು ಪುರಸಭೆ ಆವರಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತದೆ.
ಪ್ರತಿನಿತ್ಯ ವ್ಯಾಪಾರಿಗಳು ಬೆಳಿಗ್ಗೆ ಗಣೇಶಮೂರ್ತಿಗೆ ಕೈಮುಗಿದು ವ್ಯಾಪಾರ ಆರಂಭಿಸುತ್ತಾರೆ. ಆದರೆ ಕಳೆದ ತಡರಾತ್ರಿ ಪುರಸಭೆ ಗೇಟ್ ಮುರಿದು ಒಳ ನುಗ್ಗಿರುವ ಕಿಡಿಗೇಡಿಗಳು ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದಾರೆ.
ಇಂದು ಬೆಳಿಗ್ಗೆ ಭಕ್ತರು ಕೈಮುಗಿಯಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕಿಡಿಗೇಡಿಗಳ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಹತ್ತಿರದಲ್ಲಿರುವ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ.





