ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆ ದೇವಸ್ಥಾನಕ್ಕೆ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಪತ್ನಿ ಭವಾನಿ ರೇವಣ್ಣ ಜೊತೆ ದೇವಾಲಯಕ್ಕೆ ಆಗಮಿಸಿದ ಎಚ್.ಡಿ.ರೇವಣ್ಣ ಹಾಸನಾಂಬೆ ದರ್ಶನ ಪಡೆದು ಒಳಿತಾಗುವಂತೆ ಪ್ರಾರ್ಥನೆ ಸಲ್ಲಿಸಿದರು.
ಇದನ್ನು ಓದಿ : ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ ; 2 ಕೋಟಿ ಆದಾಯ
ರೇವಣ್ಣ ಕಾರನ್ನು ತಡೆದ ಅಧಿಕಾರಿಗಳು: ಹಾಸನಾಂಬೆ ದರ್ಶನಕ್ಕೆ ಕಾರಿನಲ್ಲಿ ಆಗಮಿಸಿದ್ದ ರೇವಣ್ಣ ಅವರನ್ನು ಕಂದಾಯ ಇಲಾಖೆ ಅಧಿಕಾರಿಗಳು ತಡೆದ ಘಟನೆ ನಡೆಯಿತು. ಶಿಷ್ಟಾಚಾರ ಪಾಲನೆಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೇ ಶಾಸಕ ರೇವಣ್ಣ ಹಾಸನಾಂಬೆ ದರ್ಶನಕ್ಕೆ ತಮ್ಮದೇ ಕಾರಿನಲ್ಲಿ ಭದ್ರತಾ ವ್ಯವಸ್ಥೆಗಳೊಂದಿಗೆ ಆಗಮಿಸಿದ್ದರು.
ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಶಾಸಕ ಎಚ್.ಡಿ.ರೇವಣ್ಣ ಕಾರನ್ನು ತಡೆದರು. ಈ ವೇಳೆ ರೇವಣ್ಣ ಅವರು ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ನಡೆಯಿತು. ಆದರೂ ಅಧಿಕಾರಿಗಳು ಕಾರನ್ನು ದೇವಾಲಯದ ಬಳಿ ಕೊಂಡೊಯ್ಯಲು ಅವಕಾಶವಿಲ್ಲ ಎಂದು ತಿಳಿಸಿದರು. ಬಳಿಕ ಕಾರಿನಿಂದ ಇಳಿದು ರೇವಣ್ಣ ಅವರು ನಡೆದುಕೊಂಡೇ ದೇವಾಲಯಕ್ಕೆ ಹೋಗಿ ಹಾಸನಾಂಬೆ ದೇವಿಯ ದರ್ಶನ ಪಡೆದು ವಾಪಸ್ ತೆರಳಿದರು.





