ಹಾಸನ: ವರದಕ್ಷಿಣೆ ಕಿರುಕುಳದಿಂದ ಮನನೊಂದು ಗೃಹಿಣಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸಕಲೇಶಪುರ ತಾಲ್ಲೂಕಿನ ಬ್ಯಾಕೆರೆಗಡಿ ಗ್ರಾಮದ ಧನ್ಯಶ್ರೀ ಎಂದು ಗುರುತಿಸಲಾಗಿದೆ.
ಕಳೆದ ಎರಡು ವರ್ಷದ ಹಿಂದೆ ಧನ್ಯಶ್ರೀ ಹಾಗೂ ಪ್ರೇಮ್ ಕುಮಾರ್ ಪ್ರೀತಿಸಿ ವಿವಾಹವಾಗಿದ್ದರು. ಮದುವೆ ಆದ ದಿನದಿಂದಲೂ ಪ್ರೇಮ್‌ಕುಮಾರ್ ಧನ್ಯಶ್ರೀಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ತವರು ಮನೆಗೆ ಹೋಗಿದ್ದ ಧನ್ಯಶ್ರೀ ಭಾನುವಾರ ಗಂಡನ ಮನೆಗೆ ವಾಪಸ್ ಬಂದಿದ್ದರು. ಈ ವೇಳೆ ಜಗಳ ಮಾಡಿ ಧನ್ಯಶ್ರೀ ಮೇಲೆ ಹಲ್ಲೆ ಮಾಡಿದ್ದ.
ಇದೇ ವೇಳೆ ಅತ್ತೆ ಭವಾನಿ, ಮಾವ ಪ್ರದೀಪ್ ಕೂಡ ಆಕೆಯ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.