ಹಾಸನ: ಇನ್ನು 10 ದಿನಗಳಲ್ಲಿ ಎತ್ತಿನಹೊಳೆ ಯೋಜನೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯರ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ ಬಹಳ ಜನ ಭೂಮಿ ಕೊಟ್ಟಿದ್ದಾರೆ. ಇದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಇದನ್ನು ಜನರಿಗೆ ಅರ್ಪಣೆ ಮಾಡುತ್ತೇವೆ. ಎತ್ತಿನಹೊಳೆ ಯೋಜನೆಗೆ ಟ್ರಯಲ್ ರನ್ ಪ್ರಾರಂಭ ಮಾಡಿದ್ದೇವೆ. ಯೋಜನೆಗಾಗಿ ಎಂಜಿನಿಯರ್‌ಗಳು ಸೇರಿದಂತೆ ಪ್ರತಿಯೊಬ್ಬ ನೌಕರನು ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈಗ 550 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಉದ್ಘಾಟನೆ ದಿನ ಇದರ ಆರು ಪಟ್ಟಷ್ಟು ನೀರನ್ನು ಹರಿಸುತ್ತೇವೆ ಎಂದರು.
ಇನ್ನು ಉದ್ಘಾಟನೆ ದಿನ ಸರಿಯಾದ ವ್ಯವಸ್ಥೆ ಮಾಡಿಕೊಂಡು ಸಾವಿರಾರು ಜನ ಸೇರುವಂತೆ ಐತಿಹಾಸಿಕ ಕಾರ್ಯಕ್ರಮ ಮಾಡುತ್ತೇವೆ. ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡು, ನುಡಿದಂತೆ ನಡೆದಿದ್ದೇವೆ. ಇನ್ನು 10 ದಿನಗಳಲ್ಲಿ ಉದ್ಘಾಟನೆಗೆ ಸಿಎಂ ಬಳಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.