ಹಾಸನ: ಹೊಗಳಿಕೆಯಿಂದ ಎಲ್ಲಾ ರಾಜಕೀಯ ಪಕ್ಷಗಳು ಹಾಳಾಗಿ ಹೋಗಿವೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬೇಸರ ಹೊರಹಾಕಿದ್ದಾರೆ.
ಈ ಬಗ್ಗೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನಲ್ಲಿ ಮಾತನಾಡಿದ ಅವರು, ಹೊಗಳಿಕೆಯಿಂದ ಎಲ್ಲಾ ರಾಜಕೀಯ ಪಕ್ಷಗಳು ಹಾಳಾಗಿ ಹೋಗಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾದ, ವಿವಾದ, ಪ್ರತಿವಾದ ಟೀಕೆ ಸಹಜ. ಅದು ಇಲ್ಲದೇ ಇದ್ದರೇ ಚಮಚಾಗಿರಿ ಮಾಡಿಕೊಂಡು ಕೂರಬೇಕಾಗುತ್ತದೆ. ಯಾರನ್ನೋ ಮೆಚ್ಚಿಸಲು ನೀನು ಸತ್ಯವಂತ ಎಂದು ಹೇಳೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಭ್ರಷ್ಟನನ್ನು ಭ್ರಷ್ಟ ಎಂದೇ ಹೇಳಬೇಕು. ಹಾಗೆ ಹೇಳಿದರೆ ವಿಶ್ವನಾಥ್ ಎಲ್ಲರ ಬಗ್ಗೆನೂ ಮಾತನಾಡುತ್ತಾನೆ ಅಂತಾರೆ. ಜನತಂತ್ರ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಇಲ್ಲದೇ ಬರೀ ಹೊಗಳಿಕೆ ಇದ್ದರೆ ಹೇಗೆ.? ಎಲ್ಲಾ ರಾಜಕೀಯ ಪಕ್ಷಗಳು ಹೊಗಳಿಕೆಯಿಂದಲೇ ಹಾಳಾಗಿ ಹೋಗಿವೆ. ಒಂದು ಪಕ್ಷದ ಕಾರ್ಯಕರ್ತರು ನಾಯಕ ಏನೇ ತಪ್ಪು ಮಾಡಿದರೂ ಅವನನ್ನು ಹೊಗಳುತ್ತಾರೆ. ನೀನು ತಪ್ಪು ಮಾಡಿದ್ದೀಯ ಅಂತ ಹೇಳುವುದಿಲ್ಲ. ಹಾಗಾಗಿ ಇವತ್ತು ಪಕ್ಷ ರಾಜಕಾರಣ ಹಾಳಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಇಂದು ಹೊಗಳುವಿಕೆಯಿಂದ ಪಕ್ಷ ರಾಜಕಾರಣ ಹಾಳಾಗಿ, ವ್ಯಕ್ತಿ ರಾಜಕಾರಣ ಮೆರೆಯುತ್ತಿದೆ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಹೀಗೆ ವ್ಯಕ್ತಿ ರಾಜಕಾರಣ ಶುರುವಾಗಿದೆ. ದೇಶದಲ್ಲೇ ಈಗ ಪಕ್ಷ ರಾಜಕಾರಣ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.