ಹನೂರು: ತಾಲ್ಲೂಕಿನಾದ್ಯಂತ ಭಾನುವಾರ ತಡರಾತ್ರಿ ಭರ್ಜರಿ ಮಳೆಯಾಗಿದ್ದು ಕೆಲವು ರೈತರಲ್ಲಿ ಮಂದಹಾಸ ವನ್ನುಂಟುಮಾಡಿದರೆ ಕೆಲವು ರೈತರಿಗೆ ನೋವನ್ನುಂಟು ಮಾಡಿದೆ.
ಭಾನುವಾರ ಹನೂರು ಪಟ್ಟಣ ಸೇರಿದಂತೆ ಲೊಕ್ಕನಹಳ್ಳಿ, ಪಿಜಿಪಾಳ್ಯ, ಒಡೆಯರಪಾಳ್ಯ, ಬಂಡಳ್ಳಿ, ರಾಮಾಪುರ,ಮಾರ್ಟಳ್ಳಿ ಗ್ರಾಮ ಗಳಲ್ಲಿ ಭರ್ಜರಿ ಮಳೆಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬಿಆರ್ ಟಿ ಅರಣ್ಯ ಪ್ರದೇಶ ಹಾಗೂ ಒಡೆಯರಪಾಳ್ಯ ಸುತ್ತಮುತ್ತ ಕಳೆದ ಹತ್ತು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಹುಬ್ಬೆ ಹುಣಸೆ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಭಾನುವಾರ ಹೆಚ್ಚಿನ ಮಳೆಯಾಗಿರುವುದರಿಂದ ಹುಬ್ಬೆ ಹುಣಸೆ ಜಲಾಶಯದಿಂದ ಹೆಚ್ಚಿನ ನೀರು ಬರುತ್ತಿರುವುದರಿಂದ ಪಟ್ಟಣದ ತಟ್ಟೆಹಳ್ಳ ಮೈದುಂಬಿ ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಹುಬ್ಬೆ ಹುಣಸೆ ಜಲಾಶಯ ದಿಂದ ಅತಿ ಹೆಚ್ಚಿನ ನೀರು ಬರುತ್ತಿರುವುದರಿಂದ ಪಟ್ಟಣದ ಮೂರನೇ ವಾರ್ಡಿನ ದೇವಾಂಗಪೇಟೆಗೆ ಸಂಪರ್ಕ ಕಲ್ಪಿಸುವ ಮುಳುಗು ಸೇತುವೆ ಮೇಲೆ ಹೆಚ್ಚಿನ ಪ್ರಮಾಣ ನೀರು ಬರುತ್ತಿರುವುದರಿಂದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಿ ದ್ದಾರೆ.ಇದಲ್ಲದೆ ಪಟ್ಟಣದ ಎರಡನೇ ವಾರ್ಡಿನ ಸಮೀಪ ಹನೂರು ಲೊಕ್ಕನಹಳ್ಳಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಸೇತುವೆ ಕೊಚ್ಚಿ ಹೋಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ವಾಹನಗಳು ಉದ್ದನೂರು ರಸ್ತೆಯ ಮೂಲಕ ಲೊಕ್ಕನಹಳ್ಳಿಗೆ ತೆರಳುತ್ತಿದೆ.
ಕ್ಷೇತ್ರ ವ್ಯಾಪ್ತಿಯ ಹುಬ್ಬೆ ಹುಣಸೆ ಜಲಾಶಯ,ಉಡುತೊರೆ ಜಲಾಶಯ, ಗುಂಡಾಲ್ ಜಲಾಶಯ, ಹೂಗ್ಯಂ ಜಲಾಶಯ, ಕೀರೆಪಾತಿ ಡ್ಯಾಮ್, ಗೋಪಿನಾಥಮ್ ಜಲಾಶಯ ,ಕೌಳ್ಳಿಹಳ್ಳ ಡ್ಯಾಂ ಭರ್ತಿಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಇನ್ನೂ ರಾಮನಗುಡ್ಡ ಜಲಾಶಯದ ಅಕ್ಕಪಕ್ಕದ ರೈತರುಗಳು ಜಲಾಶಯಜಾಗವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ನೀರು ಸರಾಗವಾಗಿ ಬಾರದಿರುವುದರಿಂದ ಜಲಾಶಯ ಭರ್ತಿಯಾಗಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಒತ್ತುವರಿ ತೆರವು ಮಾಡಿ ಜಲಾಶಯಕ್ಕೆ ಮಳೆಯ ನೀರು ಬರಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಲೊಕ್ಕನಹಳ್ಳಿ ಹೋಬಳಿ ಯಲ್ಲಿ ಕಳೆದ ಹತ್ತು ದಿನಗಳಿಂದ ಸತತ ಮಳೆಯಾಗುತ್ತಿರುವ ಪರಿಣಾಮ ರೈತರು ಬೆಳೆದಿರುವ ಆಲೂಗಡ್ಡೆ ಬೆಳ್ಳುಳ್ಳಿ ತರಕಾರಿ ಬೆಳೆಗಳು ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ಹಾನಿಯಾಗಿದೆ.ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.