Mysore
30
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಹನೂರು :ಬಿಜೆಪಿಯಿಂದ ಪ್ರಬಲ ಆಕಾಂಕ್ಷಿ ಜನಧ್ವನಿ ಬಿ. ವೆಂಕಟೇಶ್

ವರದಿ: ಮಹಾದೇಶ್ ಎಂ ಗೌಡ

ಹನೂರು : ಕಳೆದ 5 ವರ್ಷಗಳಿಂದ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಗಮನ ಸೆಳೆದಿರುವ ಜನಧ್ವನಿ ಬಿ ವೆಂಕಟೇಶ್ ರವರು ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಜನಾಶ್ರಯ ಟ್ರಸ್ಟ್ ಮೂಲಕ ಹನೂರು ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಜನಧ್ವನಿ ಬಿ ವೆಂಕಟೇಶ್ ರವರು ಕಳೆದ 2 ವರ್ಷಗಳಿಂದ ಬಿಜೆಪಿ ಜಿಲ್ಲಾ ಸಂಯೋಜಕರಾಗಿ ಬಿಜೆಪಿ ಸಂಘಟನೆ ಮಾಡುತ್ತಿದ್ದಾರೆ. ಹನೂರು ಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ ಸಾವಿರಾರು ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿ ಕೊಟ್ಟು ಯುವಕರ ಪಾಲಿಗೆ ಆಶಾಕಿರಣವಾಗಿದ್ದಾರೆ. ಸದಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಚಿಂತಿಸುತ್ತಿರುವ ಇವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬುದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಆಶಯ ಸಹ ಹೌದು..

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರೀತಮ್ ರವರು ಅಲ್ಪಮತದಲ್ಲಿಯೇ ಪರಾಭವಗೊಂಡರು ಸಹಾ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿಲ್ಲ.ಕ್ಷೇತ್ರಕ್ಕೆ ಸಚಿವರು, ಮುಖ್ಯಮಂತ್ರಿಗಳು ಆಗಮಿಸುತ್ತಿದ್ದ ವೇಳೆ ಮಾತ್ರ ಇವರು ಕಾಣಿಸಿಕೊಳ್ಳುತ್ತಿದ್ದನ್ನು ಹೊರತುಪಡಿಸಿದರೆ ಬಿಜೆಪಿ ಸಂಘಟನೆ ಅಷ್ಟಕಷ್ಟೆ, ಇಂತಹ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಗೊಂಡ ಜನಧ್ವನಿ ಬಿ ವೆಂಕಟೇಶ್ ರವರು ಕ್ಷೇತ್ರದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಕಾರ್ಯಕ್ರಮ ಆಯೋಜಿಸಿ ನೂರಾರು ವಿಶೇಷ ಚೇತನರಿಗೆ ವೀಲ್ ಕುರ್ಚಿ, ಸಾಧನ ಸಲಕರಣೆಗಳನ್ನು ವಿತರಿಸಿ ಗಮನ ಸೆಳೆದರು ಇನ್ನುಳಿದಂತೆ. ಹಿಂದುಳಿದ ವರ್ಗಗಳ ಮೋರ್ಚಾ,ಮಧುವನಹಳ್ಳಿ ಗ್ರಾಮದಲ್ಲಿ ಭಗೀರಥ ಪ್ರತಿಮೆಗೆ ಶಂಕು ಸ್ಥಾಪನೆ, ಉಪ್ಪಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಟ್ಟಡ ಕಾರ್ಮಿಕರಿಗೆ ತರಬೇತಿ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜನಾಶ್ರಯ ಟ್ರಸ್ಟ್ ಮೂಲಕ ಹನೂರು ವಿಧಾನಸಭಾ ಕ್ಷೇತ್ರದ ಕಾಡಂಚಿನ ಕುಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ,ಮಲೆ ಮಹಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮಗಳ ಜನರ ಸಂಚಾರಕ್ಕಾಗಿ ಜೀಪ್ ವ್ಯವಸ್ಥೆ, ನೂರಕ್ಕೂ ಹೆಚ್ಚು ಉಚಿತ ಕಣ್ಣಿನ ತಪಾಸಣಾ ಶಿಬಿರ,ಆರೋಗ್ಯ ಶಿಬಿರ ಸೇರಿದಂತೆ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಾ ಜನರ ಧ್ವನಿಯಾಗಿದ್ದಾರೆ.

ಕರೋನಾ ಮೊದಲನೇ ಅಲೆಯಲ್ಲಿ ತತ್ತರಿಸಿ ಹೋಗಿದ್ದ ಸಾವಿರಾರು ಕುಟುಂಬಗಳಿಗೆ 5 ಸಾವಿರ ಆಹಾರ ಪಡಿತರ ಕಿಟ್ ವಿತರಣೆ ಮಾಡಿದ್ದಾರೆ.ಎರಡನೆ ಅಲೆಯಲ್ಲಿ ಕೋವಿ ಡೇ ಕೇರ್ ಸೆಂಟರ್ ತೆರೆಯುವ ಮೂಲಕ ನೂರಾರು ಕರೋನ ರೋಗಿಗಳಿಗೆ ಆಶ್ರಯದಾತರಾಗಿದ್ದಾರೆ.
ತಾವೇ ಕರೋನ ರೋಗಿಗಳನ್ನು ತಮ್ಮ ಋಣ ಸಂದಾಯದ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಇತರರಿಗೆ ಧೈರ್ಯತುಂಬಿ ಹಗಲು ರಾತ್ರಿ ಎನ್ನದೆ ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ.

ಇಪ್ಪತ್ತಕ್ಕೂ ಹೆಚ್ಚು ಉಚಿತ ಕಣ್ಣಿನ ತಪಾಸಣೆ ಶಿಬಿರ: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಡತನದ ಬೇಗೆಗೆ ತತ್ತರಿಸಿರುವ ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸತ್ತೇಗಾಲ, ಹನೂರು, ಮಾರ್ಟಳ್ಳಿ, ಲೊಕ್ಕನಹಳ್ಳಿ, ಒಡೆಯರಪಾಳ್ಯ, ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ತಪಾಸಣಾ ಶಿಬಿರ ಮಾಡುವ ಮೂಲಕ ಸಾವಿರಾರು ಜನರಿಗೆ ದೃಷ್ಟಿ ಕೊಡಿಸಿದ್ದಾರೆ ಎಂದರೂ ಸಹಾ ತಪ್ಪಾಗಲಾರದು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಜನಧ್ವನಿ ಬಿ ವೆಂಕಟೇಶ್ : ಕ್ಷೇತ್ರದ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಇನ್ನೂ ಸಹ ಕುಡಿಯುವ ನೀರಿನ ಸಮಸ್ಯೆ ಬೇಸಿಗೆ ಗಾಲದಲ್ಲಿ ತಲೆದೋರುತ್ತದೆ. ಐದಕ್ಕೂ ಹೆಚ್ಚು ಗ್ರಾಮಗಳಲ್ಲಿ ತಮ್ಮ ಸ್ವಂತ ಹಣದಿಂದ ಬೋರ್ ವೆಲ್ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಮೂಲಕ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ.

ಪಡಿತರ ಪೂರೈಕೆ : ಸರ್ಕಾರ ಬಡವರಿಗೆ ನೀಡುವ ಪಡಿತರ ವನ್ನು ತೆಗೆದುಕೊಂಡು ಹೋಗಲು ವಾಹನದ ಸೌಲಭ್ಯ ಇಲ್ಲದೇ ಇರುವುದರಿಂದ ಮಲೆ ಮಹಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ವೆಂಕಟೇಶ್ ಅವರು ಖಾಸಗಿ ವಾಹನದ ವ್ಯವಸ್ಥೆ ಮಾಡುವ ಮೂಲಕ ಅನುಕೂಲ ಕಲ್ಪಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ವಿವಾಹ, ಜಾತ್ರಾಮಹೋತ್ಸವ, ಕ್ರಿಕೇಟ್ ಪಂದ್ಯಾವಳಿ, ಎಲ್ಲಾ ಮಹನೀಯರ ಜಯಂತಿ, ಮೃತಪಟ್ಟ ಕುಟುಂಬಗಳಿಗೆ ಸಹಕಾರ ನೀಡುವ ಮೂಲಕ ಕ್ಷೇತ್ರದ ಧ್ವನಿಯಾಗಿದ್ದಾರೆ.

ಒಟ್ಟಾರೆ ಇಂದಿಗೂ ಸಹ ಕ್ಷೇತ್ರದಲ್ಲಿ ನಿರ್ಗತಿಕರು ನಿಸ್ಸಹಾಯಕರಿಗೆ ಬೆನ್ನುಲುಬಾಗಿ ನಿಂತು ಅವರ ಸಮಸ್ಯೆಗಳನ್ನು ಬಗೆ ಹರಿಸುತ್ತಿದ್ದಾರೆ ಸದಾ ಕ್ಷೇತ್ರದ ಅಭಿವೃದ್ಧಿಗೆ ಚಿಂತನೆ ಮಾಡುತ್ತಿರುವ ಇವರಿಗೆ ಇನ್ನಷ್ಟು ಅಧಿಕಾರ ದೊರಯಲಿ ಎಂಬುದು ಹನೂರು ಕ್ಷೇತ್ರದ ಜನರ ಆಶಯವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ