ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ
ಗುಂಡ್ಲುಪೇಟೆ: ಅರಣ್ಯ ಇಲಾಖೆ ಕಚೇರಿಯಲ್ಲಿ ಅಂಕಹಳ್ಳಿ ಗ್ರಾಮದ ರೈತ ಉಮೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಎಫ್ ರವೀಂದ್ರ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಮುಖಂಡರು, ಅರಣ್ಯ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನನಿರತ ರೈತ ಮುಖಂಡರು, ಗುಂಡ್ಲುಪೇಟೆ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಅವರು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ರೈತರು ಜಮೀನಿನಲ್ಲಿ ಬೆಳೆದ ತೇಗದ ಮರ ಕಟಾವು ಹಾಗೂ ಸಾಗಾಣಿಕೆಗೆ ಅನುಮತಿ ನೀಡದೆ ಹಣದ ಆಸೆಗೆ ಮೀನಮೇಷ ಎಣಿಸುತ್ತಿದ್ದಾರೆ. ಹಲವು ಮಂದಿ ರೈತರು ಮರ ಕಟಾವಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿದ್ದರೂ ಅನುಮತಿ ನೀಡಿಲ್ಲ. ಹೀಗಿದ್ದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮರಗಳನ್ನು ಬೆಳೆಸಬೇಕು ಎಂದು ನಮಗೆ ಹೇಳುವುದೇಕೆ ಎಂದು ಕಿಡಿಕಾರಿದರು.
ಅಂಕಹಳ್ಳಿ ಗ್ರಾಮದ ರೈತ ಉಮೇಶ್ ತೇಗದ ಮರ ಸಾಗಾಣೆಗೆ ಅನುಮತಿ ಕೋರಿ ೮ ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅನುಮತಿ ನೀಡಲು ಇಲ್ಲಸಲ್ಲದ ದಾಖಲಾತಿಗಳನ್ನು ಕೇಳಿ ರೈತನನ್ನು ಅಲೆಸುವ ಕೆಲಸ ಮಾಡಿದ ಹಿನ್ನೆಲೆಯಲ್ಲಿ ರೈತ ಉಮೇಶ್ ಮನನೊಂದು ವಿಷ ಕುಡಿದು ಎಸಿಎಫ್ ಎದುರೆ ವಿಷ ಕುಡಿದಿದ್ಧಾರೆ. ಈ ಘಟನೆಗೆ ಎಸಿಎಫ್ ರವೀಂದ್ರ ಅವರೇ ಕಾರಣ. ಆದ್ದರಿಂದ ಕೂಡಲೇ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಪಟ್ಟು ಹಿಡಿದರು.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಅವರಿಗೆ ಪ್ರತಭಟನನಿರತ ರೈತ ಮುಖಂಡರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್, ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಕುಂದಕೆರೆ ಸಂಪತ್ತು, ಮಾಡ್ರಹಳ್ಳಿ ಮಹದೇವಪ್ಪ, ಆಲಹಳ್ಳಿ ಮಹೇಶ್, ಬೆಟ್ಟದಮಾದಹಳ್ಳಿ ಷಣ್ಮುಖ ಸ್ವಾಮಿ, ಮಾಡ್ರಹಳ್ಳಿ ನವೀನ್, ಕಂದೇಗಾಲ ಲೋಕೇಶ್, ಮಂಜು, ಕಂದೇಗಾಲ ಮಹೇಶ್, ಕುನಗಳ್ಳಿ ಸತೀಶ್, ಮಹೇಶ್, ಸುರೇಶ್, ಬೆಟ್ಟದಮಾದಹಳ್ಳಿ ಮಂಜುನಾಥ್, ನಾಗರಾಜು, ಶಿವಯ್ಯ ಇತರರು ಹಾಜರಿದ್ದರು.